ಮಕ್ಕಳಿಗೆ ಸಂಸ್ಕಾರ ನೀಡಲು ಸಲಹೆ

Advice for giving rituals to children
Published on

ಅಳ್ನಾವರ: ಹಳ್ಳಿ ಹಳ್ಳಿಗಳಲ್ಲಿ ಭಾರತೀಯ ಮೂಲವಾದ ಆಧ್ಯಾತ್ಮಿಕತೆ ಹಾಗೂ ಸಂಸ್ಕೃತಿಯ ಭಾವನೆಗಳು ಬೆಳೆದಂತೆ ದೇಶ ಬಲಿಷ್ಠತೆಯ ಜತೆಗೆ ಉನ್ನತಿಗೊಳ್ಳುವುದು ಎಂದು ದೇವರಹುಬ್ಬಳ್ಳಿಯ ಸಿದ್ಧಾಶ್ರಮದ ಶ್ರೀ ಸಿದ್ಧ ಶಿವಯೋಗಿ ಸ್ವಾಮೀಜಿ ಹೇಳಿದರು.

ತಾಲೂಕಿನ ಬೆಣಚಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಆಂಜನೇಯ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಆರೋಗ್ಯಕರ ಯುವಶಕ್ತಿಯಿಂದ ಮಹತ್ತರ ಕಾರ್ಯಗಳು ನಡೆಯುತ್ತವೆ. ತಂದೆ-ತಾಯಿಗಳು ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದು ಹೇಳಿದರು.

ಬೆಳಗಾವಿಯ ಮುಕ್ತಿಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಮಕ್ಕಳು ಆಧುನಿಕತೆ ಮೋಹಕ್ಕೆ ಸಿಲುಕಿ ದುರ್ವ್ಯಸನಿಗಳು ಆಗುವುದನ್ನು ತಡೆಯಬೇಕಿದೆ. ಅವರು ದೇವರನ್ನು ಭಕ್ತಿ ಭಾವದಿಂದ ಸ್ಮರಿಸಲು ಮತ್ತು ಗುರು ಹಿರಿಯರಿಗೆ ಗೌರವ ನೀಡುವಂತೆ ಮಾಡಲು ಧಾರ್ಮಿಕ ಕಾರ್ಯಗಳು ನಿರಂತರವಾಗಿ ಜರುಗಬೇಕು ಎಂದರು.

ಕಿವುಡೆಬೈಲದ ಶ್ರೀ ಬಾಲಯೋಗಿ ಮಾಣಿಕ್ಯ ಚನ್ನವೃಷಭೇಂದ್ರ ಸ್ವಾಮಿ ಹಾಗೂ ಹಿರೇಮುನವಳ್ಳಿಯ ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ವೇ. ರವಿಶಾಸ್ತ್ರಿ ಹಾಗೂ ಗ್ರಾಮಸ್ಥರು ಇದ್ದರು.

ಸೋಮವಾರ ನಿರಲಗಾದ ಶ್ರೀ ವಿಠ್ಠಲ ಮಹಾರಾಜ ಹಾಗೂ ಬಿ.ಕೆ. ಹಳ್ಳಿಯ ಶ್ರೀ ರಾಮದಾಸ ಮಹಾರಾಜರಿಂದ ಭಜನೆ, ಕೀರ್ತನೆ ಜರುಗಿದವು. ಧಾರ್ಮಿಕ ವಿಧಿ-ವಿಧಾನಗಳನ್ನು ನಾರಾಯಣ ಭಟ್ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net