

ಮುಧೋಳ: ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿ ಮಾಡುವುದಷ್ಟೇ ಪಾಲಕರ ಕರ್ತವ್ಯವಲ್ಲ. ಅವರನ್ನು ಸಂಸ್ಕಾರವಂತರನ್ನಾಗಿ ರೂಪಿಸುವುದೂ ದೊಡ್ಡ ಜವಾಬ್ದಾರಿಯಾಗಿದೆ ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹೇಳಿದರು.
ತಾಲೂಕಿನ ಗುಲಗಾಲ ಜಂಬಗಿ ಗ್ರಾಮದಲ್ಲಿ ಮಂಗಳವಾರ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಆಶ್ರಯದಲ್ಲಿ ಬೆನಕಟ್ಟಿಯ ಹೇಮವೇಮನ ಸದ್ಬೋಧನ ಪೀಠದಿಂದ ಭಾನುವಾರ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನರ 173ನೇ ಮಾಸಿಕ ತತ್ವ ಚಿಂತನ ಹಾಗೂ ಹೇಮರಡ್ಡಿ ಮಲ್ಲಮ್ಮ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಸಂಸ್ಕಾರ ಕೊಡಬೇಕು ಎನ್ನುವುದಾದರೆ ಮೊದಲು ನಾವು ಸಂಸ್ಕಾರವಂತರಾಗಬೇಕು. ಸತ್ಕಾರ್ಯಗಳಿಗೆ ದಾನ ನೀಡುವ ಪರೋಪಕಾರ ಗುಣ ಬೆಳೆಸಿಕೊಂಡಾಗ ಬದುಕಿಗೆ ಸಾರ್ಥಕ್ಯ ಬರುತ್ತದೆ ಎಂದರು.
ಬಾಗಲಕೋಟೆ ಹೇಮ ವೇಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೇರಿ ಮಾತನಾಡಿ, ಸತ್ಸಂಗ, ಸದ್ವಿಚಾರಗಳ ಕೊರತೆಯಿಂದಾಗಿ ಮನುಷ್ಯ ಸ್ವಾರ್ಥಿಯಾಗಿದ್ದಾನೆ. ಆ ನಿಟ್ಟಿನಲ್ಲಿ ಹೇಮ ವೇಮನ ಸದ್ಬೋಧನ ಪೀಠ ಪ್ರತಿ ತಿಂಗಳು ಸತ್ಸಂಗ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಜನರಲ್ಲಿ ಸಂಸ್ಕಾರ, ಸದ್ವಿಚಾರಗಳನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಮತ್ತಿಕಟ್ಟಿಯ ಪೂರ್ಣಾನಂದ ಆಶ್ರಮದ ಮಾತೋಶ್ರೀ ರಾಜರಾಜೇಶ್ವರಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮನ ತಾಳ್ಮೆ, ಸಹನೆಯ ಗುಣ ಹಾಗೂ ಮಹಾಯೋಗಿ ವೇಮನರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂದರು.
ಸದಾಶಿವ ಬಟಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆಯ ಹೇಮ ವೇಮ ಸಂಸ್ಥೆಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಶಂಕರ ಯಡಹಳ್ಳಿ, ಜಗದೀಶ ಮುಳ್ಳೂರ, ವೆಂಕಣ್ಣ ಗಿಡ್ಡಪ್ಪನವರ, ಗೋವಿಂದಪ್ಪ ಮುಳ್ಳೂರ, ಸಂಗಪ್ಪ ಬಟಕುರ್ಕಿ ಇದ್ದರು.
ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ತಂಡದವರು ವೇಮನ ವಚನ ಪಠಿಸಿದರು. ದುಂಡಪ್ಪ ಲಿಂಗರಡ್ಡಿ ಸ್ವಾಗತಿಸಿದರು. ಶ್ರೀನಿವಾಸ ಬೆನಕಟ್ಟಿ ನಿರೂಪಿಸಿದರು. ಶೇಖರ ಉದಪುಡಿ ವಂದಿಸಿದರು.