ಅಪರಾಧ ಪ್ರಕರಣ ನಿಯಂತ್ರಣಕ್ಕೆ ಸಲಹೆ

h26-Kamaripeth Poice Station 1
Published on

ಹುಬ್ಬಳ್ಳಿ: ಅಪರಾಧಿಗಳಿಗೆ ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸುವುದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ. ರಾಜ್ಯದ ಜನರ ರಕ್ಷಣೆ, ಆಸ್ತಿ-ಪಾಸ್ತಿ, ಮಾನ, ಪ್ರಾಣ ರಕ್ಷಿಸಿ ನೆಮ್ಮದಿ ಬದುಕು ಸೃಷ್ಟಿಸುವ ಜವಾಬ್ದಾರಿ ಪೊಲೀಸರ ಮೇಲಿದೆ. ಇದಕ್ಕಾಗಿ ಇಲಾಖೆಗೆ ಅಗತ್ಯ ಸವಲತ್ತು ಮತ್ತು ನೂತನ ಠಾಣೆ ಒದಗಿಸಲು ಸರ್ಕಾರ ಸದಾ ಸಿದ್ಧವಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ವಿಶ್ವಾಸ ಮೂಡಿಸಿದರು.

ಇಲ್ಲಿಯ ಕಮರಿಪೇಟೆ ಪೊಲೀಸ್ ಠಾಣೆಯನ್ನು ಭಾರತ್ ಸರ್ಕಲ್ ಬಳಿಯ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಿ ಠಾಣೆಗೆ ಬರುವವರನ್ನು ಆರೋಗ್ಯಕರವಾಗಿ ನಡೆಸಿಕೊಳ್ಳಬೇಕು. ಜನರಿಗೆ ಉದ್ಯೋಗ ಇಲ್ಲದಿರುವುದು, ಬದುಕಿಗೆ ಅವಕಾಶ ಇಲ್ಲದಿರುವಾಗ ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುತ್ತಾರೆ. ಪೇದೆಗಳು, ಪೊಲೀಸ್ ಅಧಿಕಾರಿಗಳು ಹೆಚ್ಚೆಚ್ಚು ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳಿಗೆ, ಅಕ್ರಮಗಳಿಗೆ ಬೆಂಬಲ ನೀಡಬಾರದು. ಬೆಂಬಲ ಕೊಡುವ ಕೆಲಸ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪೊಲೀಸ್ ಠಾಣೆ ಸ್ಥಳಾಂತರಕ್ಕೆ ಸೂಚನೆ ನೀಡಿ ಒಂದೇ ವಾರದಲ್ಲಿ ಕಾರ್ಯಗತವಾಗಿರುವುದು ಸಂತಸ ತಂದಿದೆ. ಈ ಬಾರಿ ಸಂಭವಿಸಬಹುದಾದ ಮಳೆ ಅವಾಂತರದಿಂದ ಪಾರಾದಂತಾಗಿದೆ. ಇದಕ್ಕೆ ಶ್ರಮಿಸಿದ ಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸಿಇಎನ್ ಕ್ರೈಂ ಠಾಣೆ ಎಸಿಪಿ ಡಾ. ಶಿವರಾಜ ಕಟಕಬಾವಿ, ಕಮರಿಪೇಟೆ ಇನ್‌ಸ್ಪೆಕ್ಟರ್ ಮಹಾಂತೇಶ ಹೂಲಿ, ಪಾಲಿಕೆ ಹೆಚ್ಚುವರಿ ಆಯುಕ್ತ ವಿಜಯಕುಮಾರ, ಘನತಾಜ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ ಯರಂಗಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net