

ಹುಬ್ಬಳ್ಳಿ: ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು. ಶಿಕ್ಷಕರು, ಮಕ್ಕಳಿಗೆ ನಾಯಕತ್ವ ಗುಣ ಬೆಳೆಸಬೇಕು ಎಂದು ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ರಾಜೀವ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಶಾಲಾ ಸಂಸತ್ ಚುನಾವಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಕಲಿಕೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಸಾಮಾಜಿಕ ಹೊಣೆಗಾರಿಕೆಯನ್ನು ಚಿಕ್ಕಂದಿನಿಂದಲೇ ಕಲಿಸಬೇಕು. ಇದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಿದಂತಾಗುತ್ತದೆ ಎಂದರು. ತಮಗೆ ಹಂಚಿಕೆ ಮಾಡಿದ ಖಾತೆಗಳನ್ನು ಜವಾಬ್ದಾರಿಯುತಾಗಿ ನಿಭಾಯಿಸುವಂತೆ ಮಕ್ಕಳಿಗೆ ಶಾಸಕರು ಸಲಹೆ ನೀಡಿದರು.
ನಂತರ ಶಾಲಾ ಸಂಸತ್ಗೆ ಆಯ್ಕೆಯಾದ ಮಕ್ಕಳಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಸಭೆಯ ಕಾರ್ಯದರ್ಶಿ ಎಸ್. ರಾದಾಕೃಷ್ಣನ್, ಮುಖ್ಯೊಪಾಧ್ಯಾಯಿನಿ ವಿಜಯಲಕ್ಷ್ಮೀ ಹಿರೇಮಠ, ವೀಣಾ ತುಪ್ಪದ, ಸುರೇಖಾ ಚಾಂದಗುಡೆ ಉಪಸ್ಥಿತರಿದ್ದರು.