

ಹುಬ್ಬಳ್ಳಿ: ಸರ್ವರಿಂದ ಪ್ರೋತ್ಸಾಹ ಪಡೆದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಭಾರತ ಸರ್ಕಾರ ಆಹಾರ ನಿಗಮದ ರಾಜ್ಯ ಸದಸ್ಯ ರವೀಂದ್ರನಾಥ ದಂಡಿನ ಸಲಹೆ ನೀಡಿದರು.
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಕನಕದಾಸರ ಜಯಂತ್ಯುತ್ಸವ ನಿಮಿತ್ತ ಇಲ್ಲಿಯ ವಿದ್ಯಾನಗರದ ಮರಾಠಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಕರು ಭಾರತ ದೇಶದ ಗೌರವಾನ್ವಿತ ವ್ಯಕ್ತಿಗಳಾಗಬೇಕು. ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಭಾರತ ದೇಶವು ಆರ್ಥಿಕವಾಗಿ ವಿಶ್ವದಲ್ಲಿ ಮೂರನೇ ಸ್ಥಾನ ಪಡೆದು ಶ್ರೀಮಂತವಾಗಿದೆ. ಬಡ ರಾಷ್ಟ್ರ ಎನ್ನುವುದು ಈಗ ಇಲ್ಲವಾಗಿದೆ. ಇಂಥ ಸಂದರ್ಭದಲ್ಲಿ ನಾವು-ನೀವೆಲ್ಲ ಜೀವಿಸುತ್ತಿರುವುದೇ ಸಂಭ್ರಮದ ವಿಷಯ ಎಂದರು.
ಸೇನೆ ಮುಖಂಡ ಪರಶುರಾಮ ದಿವಾನದ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷವೂ ಯೋಧರೆಲ್ಲ ಸೇರಿ ಇಂಥ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ. ನಾವು ದುಡಿದಿದ್ದರಲ್ಲಿಯೇ ಸಮಾಜ ಸೇವೆಗೆ ವಿನಿಯೋಗಿಸಬೇಕೆಂಬುದು ನಮ್ಮ ನಿರ್ಧಾರ ಎಂದರು.
ಕುಂದಗೋಳದ ಕಲ್ಯಾಣಪುರಮಠದ ಶ್ರೀ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಿದ್ದರು.
ಹು-ಧಾ ಮಹಾನಗರ ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ.ಎನ್. ಗಡ್ಡಿ, ನಿಂಗಪ್ಪ ಜಕ್ಕಲಿ, ನಾರಾಯಣ ವೈದ್ಯ, ಪರಶುರಾಮ ತಹಸೀಲ್ದಾರ, ಲಕ್ಷ್ಮಪ್ಪ ಭಜಂತ್ರಿ, ಗುರುಪಾದಪ್ಪ ಯರಗುಪ್ಪಿ, ಮಹಾಂತೇಶ ತಹಸೀಲ್ದಾರ, ಪ್ರೊ. ಸಂದೀಪ ಬೂದಿಹಾಳ, ಗುರುನಾಥ ಯರಗುಪ್ಪಿ, ಪ್ರಕಾಶ ಕಂಬಳಿ, ಇತರರು ಇದ್ದರು.