

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್ ಈಗ ರಾಜಾಸೀಟ್‌ನಲ್ಲಿ ಅಡ್ವೆಂಚರ್ ಆಕ್ಟಿವಿಟೀಸ್(ಸಾಹಸಿ ಕ್ರೀಡೆಗಳು) ಮೂಲಕ ಮತ್ತಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಸಜ್ಜಾಗುತ್ತಿದೆ.
ರಾಜಾಸೀಟ್‌ನಲ್ಲಿ ಅಡ್ವೆಂಚರ್ ಆಕ್ಟಿವಿಟೀಸ್(ಸಾಹಸಿ ಕ್ರೀಡೆಗಳು) ಕೂಡಾ ಆರಂಭವಾಗಲಿದ್ದು, ಈಗಾಗಲೇ ಇದರ ಕೆಲಸ ಶೇ.೮೦ ರಷ್ಟು ಪೂರ್ಣಗೊಂಡಿದ್ದು, ಕೆಲವೆ ದಿನಗಳಲ್ಲಿ ರಾಜಾಸೀಟ್ ಆಕರ್ಷಣೆ ಹೆಚ್ಚಲಿದೆ.
ಜಿಲ್ಲಾಡಳಿತ ಇದಕ್ಕಾಗಿಯೇ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಿದೆ. ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆಯ ಟೆಂಡರ್‌ನ್ನು ಬೆಂಗಳೂರಿನ ಸದರ್ನ್ ಅಡ್ವೆಂಚರ್ ಪಡೆದುಕೊಂಡು ಕಾಮಗಾರಿ ಆರಂಭಿಸಿದೆ. ಸಾಹಸೋದ್ಯಾನದಲ್ಲಿನ ಪರಿಕರಗಳನ್ನು ಸಂಸ್ಥೆಯೇ ಹಾಕಬೇಕು. ಸಾರ್ವಜನಿಕರಿಂದ ಶುಲ್ಕವನ್ನು ಅವರೇ ವಸೂಲು ಮಾಡಬೇಕು. ತಿಂಗಳಿಗೆ ಇಂತಿಷ್ಟು ಮೊತ್ತವನ್ನು ಜಿಲ್ಲಾಡಳಿತಕ್ಕೆ ಪಾವತಿಸಬೇಕು ಎಂಬ ನಿಯಮಗಳನ್ನು ವಿಧಿಸಲಾಗಿದೆ.
ಎಲ್ಲ ಬಗೆಯ ಮುನ್ನಚ್ಚರಿಕೆಗಳನ್ನೂ ಜಿಲ್ಲಾಡಳಿತ ತೆಗೆದುಕೊಂಡಿದೆ. ಸರ್ಕಾರದಿಂದ ಅಂಗೀಕರಿಸಿದ ಸಂಸ್ಥೆಯಿಂದ ಭೂಸಾಹಸ ಕ್ರೀಡೆಗಳ ತರಬೇತಿಯನ್ನು ಪಡೆದಿರುವುದನ್ನು ಕಂಪನಿಗೆ ಕಡ್ಡಾಯಗೊಳಿಸಲಾಗಿದೆ. ರೋಪ್ ಲೈನ್ ಕ್ರೀಡೆ ನಡೆಸಿರುವ ಕುರಿತು ಮೂರು ವರ್ಷಗಳ ಅನುಭವ ಇರಬೇಕು. ಭೂಸಾಹಸ ಕ್ರೀಡೆಗಳಿಗೆ ಸಂಬಂಧಿಸಿದಂತೆ ೩ ವರ್ಷ ಕಾಲ ತೆರಿಗೆ ಪಾವತಿಸಿರಬೇಕು. ಜತೆಗೆ ವಾರ್ಷಿಕ ರೂ.೧೦ ಲಕ್ಷ ವಹಿವಾಟು ನಡೆಸಿರಬೇಕು ಎಂಬುದು ಸೇರಿದಂತೆ ಅನೇಕ ಷರತ್ತುಗಳನ್ನು ವಿಧಿಸಿದೆ.
ರಾಜಾಸೀಟ್‌ನಲ್ಲಿ ಎಲ್ಲವೂ ಇದೆ: ಇತ್ತೀಚಿನ ಕೆಲ ವರ್ಷಗಳ ಹಿಂದೆ ರಾಜಾಸೀಟ್ ಅಂದರೆ ಒಂದು ರೀತಿಯ ತಾತ್ಸಾರ ಮನೋಭಾವ ಸ್ಥಳೀಯರಲ್ಲೇ ಇತ್ತು. ರಾಜಾಸೀಟ್ ಅಂದ್ರೆ ಮೂಗು ಮುರಿಯುತ್ತಿದ್ದ ಜನ ರಾಜಾಸೀಟಾ? ಅಲ್ಲೇನಿದೆ..? ಎನ್ನುತ್ತಿದ್ದರು. ರಾಜಾಸೀಟ್ ಉದ್ಯಾನವನದ ಸ್ಥಿತಿಯೂ ಹಾಗೆಯೇ ಇತ್ತು. ರಾಜಾಸೀಟ್‌ನಲ್ಲಿ ರಾಜರು ಕುಳಿತು ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದ ಒಂದು ಐತಿಹಾಸಿಕ ಮಂಟಪ, ಒಂದಷ್ಟು ಚಂದದ ಹೂ ಗಿಡಗಳು, ಸೂರ್ಯಾಸ್ತ ಮತ್ತು ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಒಂದು ವ್ಯೆ ಪಾಯಿಂಟ್ ಬಿಟ್ಟರೆ ಇನ್ನೇನು ಇರಲಿಲ್ಲ. ಇದರಿಂದ ಸಂಜೆ ಒಂದೆರಡು ಗಂಟೆಯ ವಿಹಾರಕ್ಕಷ್ಟೆ ರಾಜಾಸೀಟ್ ಯೋಗ್ಯವೆಂಬಂತಿತ್ತು. ನಂತರದ ದಿನಗಳಲ್ಲಿ ಇಲ್ಲಿ ಮ್ಯೂಸಿಕಲ್ ಫೌಂಟೇನ್ ಆರಂಭವಾಯಿತು. ಇದು ಒಂದಷ್ಟು ಪ್ರವಾಸಿಗರನ್ನು ಆಕರ್ಶಿಸುತ್ತಿತ್ತು. ಬಳಿಕ ಇದ್ದ ಒಂದೇ ಒಂದು ಪುಟಾಣಿ ರೈಲೂ ಶೆಡ್‌ನಲ್ಲಿ ಸೇರಿ ಮಕ್ಕಳಿಗೆ ಆಕರ್ಷಣೆಯೇ ಇಲ್ಲದಾಯಿತು. ಈ ಸಂದರ್ಭ ಜಿಲ್ಲೆಯ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುತುವರ್ಜಿಯಿಂದ ರಾಜಾಸೀಟ್ ಗ್ರೇಟರ್ ರಾಜಾಸೀಟ್ ಆಗಿ ಮೇಲ್ದರ್ಜೆಗೇರಿತು.
ಒಟ್ಟು ೭.೫ ಏಕರೆ ಪ್ರದೇಶದಕ್ಕೆ ರಾಜಾಸೀಟ್ ಉದ್ಯಾನವನವನ್ನು ವಿಸ್ತರಿಸಲಾಯಿತು. ಸುಸಜ್ಜಿತ ವಾಕಿಂಗ್ ಪಾತ್, ಅಲ್ಲಲ್ಲಿ ವೀಕ್ಷಣೆ ಮಂಟಪಗಳನ್ನು ನಿರ್ಮಿಸಿ ರಾಜಾಸೀಟನ್ನು ಮತ್ತಷ್ಟು ಸುಂದರವಾಗಿಸಲಾಯಿತು. ಇದಾದ ಬಳಿಕ ಇಲ್ಲಿಗೆ ಪ್ರವಾಸಿಗರ ಹರಿವೂ ಹೆಚ್ಚಾಯಿತು. ಸಂಜೆ ಮಾತ್ರವಲ್ಲದೇ ಹಗಲಿಡೀ ಇಲ್ಲಿ ಪ್ರವಾಸಿಗರು ಭೇಟಿ ನೀಡಿ ವೀಕ್ಷಿಸುವಂತಾಯಿತು. ಇದಕ್ಕೀಗ ಈ ಅಡ್ವೆಂಚರ್ ಚಟುವಟಿಕೆಗಳೂ ಸೇರ್ಪಡೆಯಾಗುತ್ತಿರುವುದರಿಂದ ರಾಜಾಸೀಟ್ ಮತ್ತಷ್ಟು ಸ್ಪೆಷಲ್ ಪ್ರವಾಸಿ ತಾಣವಾಗುವತ್ತ ಸಾಗಿದೆ.
ಏನೇನಿದೆ?
ಗ್ರೇಟರ್ ರಾಜಾಸೀಟ್‌ನಿಂದ ಬ್ರಿಡ್ಜ್ ದಾಟಿದರೆ ಸಣ್ಣ ಮಕ್ಕಳ ಆಟಿಕೆಗಳು ಸಿಗಲಿವೆ. ಇವುಗಳನ್ನು ವಿದೇಶದಿಂದ ತರಿಸಲಾಗಿದೆ. ಅಲ್ಲಿಂದ ಮೇಲೆ ಹೋದರೆ ಮಕ್ಕಳಿಗಾಗಿ ಜಂಪಿಂಗ್ ಆಟಿಕೆ ಇದೆ. ಲೋ ರೋಪ್ ಸಹ ಇಲ್ಲೇ ಇದ್ದು, ಸುರಕ್ಷತೆಗಾಗಿ ಬೆಲ್ಟ್, ಹೆಲ್ಮೆಟ್‌ಗಳೂ ಇಲ್ಲಿವೆ. ನೆಟ್ ಕ್ಲೈಂಬಿಂಗ್, ಟೈರ್ ಕ್ಲೈಬಿಂಗ್ ಸೇರಿದಂತೆ ೬ ಬಗೆಯ ಸಾಹಸ ಕ್ರೀಡೆಗಳು ಇಲ್ಲೇ ಇರಲಿವೆ. ಇದರೊಂದಿಗೆ ಪುಣೆಯಿಂದ ತರಿಸಲಾಗಿರುವ ರಾಕೆಟ್ ಇಜೆಕ್ಟರ್ ಪ್ರಧಾನ ಆಕರ್ಷಣೆ ಎನಿಸಿದೆ. ಕ್ಯಾಟರ್ ಬಿಲ್ ಎಳೆದು ಬಿಟ್ಟಂತೆ ಇದು ರಾಕೆಟ್‌ನಂತೆ ಸುಮಾರು ೪೦ ಅಡಿಯಷ್ಟು ಎತ್ತರಕ್ಕೆ ಜಿಗಿದು ವಾಪಸ್ ಬರಲಿದೆ. ಇದೊಂದು ಬಗೆಯ ಅವಿಸ್ಮರಣೀಯ ಅನುಭವವನ್ನು ಪ್ರವಾಸಿಗರಿಗೆ ನೀಡಲಿದೆ. ಇನ್ನು ಜಿಪ್‌ಲೈನ್, ಜಾಯಿಂಟ್ಸ್ ವಿಂಗ್ ಸೇರಿದಂತೆ ಇನ್ನೂ ಕೆಲವು ಸಾಹಸ ಕ್ರೀಡಾ ಪರಿಕರಗಳನ್ನು ಅಳವಡಿಸಬೇಕಿದೆ.
ಖಾಸಗಿ ಸಹಭಾಗಿತ್ವದಡಿ ಯೋಜನೆ ರೂಪಿಸಲಾಗಿದ್ದು, ಕೆಲಸಗಳು ಬಹುತೇಕ ಪೂರ್ಣಗೊಂಡಿದೆ. ಸಾಹಸ ಕ್ರೀಡೆಗಳು ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಲಿದೆ. ಜತೆಗೆ ಜನರನ್ನು ಸೆಳೆಯಲಿದೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ಸಂದರ್ಭ ಲೋಕಾರ್ಪಣೆಗೊಳಿಸುವ ಚಿಂತನೆ ಇದೆ.
ಚೆಕ್ಕೇರ ಪ್ರಮೋದ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಕೇರಳ ಸೇರಿದಂತೆ ವಿವಿಧೆಡೆ ಅಡ್ವೆಂಚರ್ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಮಡಿಕೇರಿಗೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವುದರಿಂದ ಇಲ್ಲಿಯೂ ಆರಂಭಿಸುವ ಯೋಜನೆ ಮೊದಲೇ ಇತ್ತು. ಇದಕ್ಕೆ ಈಗ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್‌ನಲ್ಲೇ ಸ್ಥಳ ದೊರೆತಿರುವುದು ಒಳ್ಳೆಯ ವಿಚಾರ. ಇಲ್ಲಿ ಇನ್ನಷ್ಟು ಆಕ್ಟಿವಿಟಿಗಳನ್ನು ಆರಂಭಿಸುವ ಚಿಂತನೆಯಿದೆ.
-ನಿದಿನ್ ಚಂದ್ರ, ಅಡ್ವೆಂಚರ್ ಕಂಪನಿ ಮಾಲೀಕ, ಕೇರಳ