ಅಡ್ವಾಣಿಗೆ ಭಾರತರತ್ನ ದೇಶಕ್ಕೆ ಸಂತಸ: ಸುತ್ತೂರುಶ್ರೀಗಳ ಅಭಿಮತ

mysore
Published on

ಮೈಸೂರು: ಭಾರತದ ಹಿರಿಯ ರಾಜಕೀಯ ಮುತ್ಸದ್ಧಿ ಎಲ್.ಕೆ.ಅಡ್ವಾಣಿ ಅವರಿಗೆ ಭಾರತರತ್ನ ಪುರಸ್ಕಾರ ದೊರೆತಿರುವುದು ದೇಶವಾಸಿಗಳಿಗೆ ಸಂತೋಷವನ್ನು ಉಂಟುಮಾಡಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.


ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಬಲಗೈಯಾಗಿ ದುಡಿದ ಅಡ್ವಾಣಿಯವರು ನಿಷ್ಕಾಮಕರ್ಮಕ್ಕೆ ಭಾಷ್ಯದಂತೆ ಇರುವವರು. ಬಿಜೆಪಿ ಪುನರುಜ್ಜೀವನದಲ್ಲಿ ಅವರು ಕೈಗೊಂಡ ರಥಯಾತ್ರೆ ಒಂದು ಪ್ರಮುಖ ಘಟ್ಟ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವ ಶುಭಯಜ್ಞದ ರೂವಾರಿಗಳು ಅವರೇ ಎಂದರೆ ತಪ್ಪಾಗಲಾರದು ಎಂದು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.


ರಾಜಕೀಯದ ಏಳುಬೀಳುಗಳು ಅವರನ್ನು ಎಂದೂ ಕುಗ್ಗಿಸಲಿಲ್ಲ. ಯಾರ ವಿರುದ್ಧವೂ ಅವರು ಕೆಟ್ಟ ಮಾತುಗಳನ್ನಾಡಲಿಲ್ಲ. ರಾಷ್ಟ್ರಭಕ್ತಿಯನ್ನೇ ಉಸಿರಾಗಿಸಿಕೊಂಡ ಅವರು ಸ್ಥಿತಪ್ರಜ್ಞೆ, ಸಮಚಿತ್ತವನ್ನು ಸದಾಕಾಲವೂ ಕಾಯ್ದುಕೊಂಡು ಬಂದ ವಿವೇಕಶಾಲಿಗಳು. ಸಂದುಹೋದ ಮೌಲ್ಯ ಒಂದು ತಲೆಮಾರಿನ ಜೀವಂತ ಪ್ರತಿನಿಧಿ ಅವರು. ಇಂಥ ಭಾರತಾಂಬೆಯ ಸುಪುತ್ರನಿಗೆ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವ ಲಭಿಸಿರುವುದು ಅಭಿಮಾನದ ವಿಷಯ ಎಂದು ಹೇಳಿದ್ದಾರೆ.


ಅವರು ಶ್ರೀಮಠದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಆ ಸಂದರ್ಭಗಳಲ್ಲಿ ತೋರಿದ ಸರಳತೆ, ಆತ್ಮೀಯತೆ, ಅಭಿಮಾನಗಳು ನಮ್ಮ ಮನಸ್ಸಿನಲ್ಲಿ ಇಂದೂ ಹಸಿರಾಗಿವೆೆ ಎಂದು ಸ್ಮರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net