

ಬೀರೂರು: ಸಹಕಾರ ಸಂಘಗಳ ಪ್ರಗತಿಗೆ ಷೇರುದಾರ ಮತ್ತು ಆಡಳಿತ ಮಂಡಳಿ ಸಹಕಾರ, ಸಹಭಾಗಿತ್ವ ಅಗತ್ಯ ಎಂದು ಬೀರೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎ.ಸಿ.ಸತೀಶ್ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ನಡೆದ ಸಹಕಾರ ಬ್ಯಾಂಕ್‌ಗಳ 17ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, 347 ಜನ ಸದಸ್ಯರಿಂದ ಆರಂಭವಾದ ಸಹಕಾರಿ ಸಂಸ್ಥೆ ಇಂದು 1090 ಸದಸ್ಯರನ್ನು ಹೊಂದಿ 28.62 ಲಕ್ಷ ಷೇರು ಬಂಡವಾಳ, 3.70 ಕೋಟಿ ರೂ. ಠೇವಣಿ ಹಾಗೂ 2.74 ಕೋಟಿ ರೂ. ಸಾಲ ನೀಡುವ ಜತೆಗೆ 4.56 ಕೋಟಿ ರೂ.ದುಡಿಯುವ ಬಂಡವಾಳ ಹೊಂದಿದೆ. ಷೇರುದಾರರಿಗೆ ಪ್ರಸಕ್ತ ಸಾಲಿನಲ್ಲಿ ಶೇ.7.5 ಲಾಭಾಂಶ ವಿತರಿಸಲಾಗುತ್ತಿದೆ ಎಂದು ಘೋಷಿಸಿದರು.
ಪ್ರಸಕ್ತ ಸಾಲಿನಿಂದ ಅಡಕೆ ಅಡಮಾನ ಸಾಲ ವಿತರಿಸುವ ಯೋಜನೆ ರೂಪಿಸಿದ್ದು , ಷೇರುದಾರರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಚಿಂತನೆ ನಡೆದಿದೆ. ಎಸ್‌ಎಸ್‌ಎಲ್‌ಸಿ , ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಷೇರುದಾರರು ಸಹಕಾರಿ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡು ಪ್ರಗತಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರಣಯ್ ಕುಮಾರ್ ಜೈನ್, ಧನುಷ್, ಇಂದ್ರೇಶ್ ಉಪ್ಪಾರ್ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕಪಡೆದ ದೀಪಿಕಾ ಅವರನ್ನು ಪುರಸ್ಕರಿಸಲಾಯಿತು.
ಉಪಾಧ್ಯಕ್ಷ ಜಿ.ಪಿ.ನವೀನ್, ನಿರ್ದೇಶಕರಾದ ಪಿ.ಶಾಂತಪ್ಪ,ಮಂಜುನಾಥ್, ನಿರ್ದೇಶಕ ಎನ್.ಎಸ್.ರಾಜು, ಸಾಲ ಸಮಿತಿ ಅಧ್ಯಕ್ಷ ಕೆ.ಆರ್.ವಿಶ್ವನಾಥ್, ರುದ್ರೇಶ್, ಹರೀಶ್‌ಕುಮಾರ್, ಲೆಕ್ಕಿಗ ಎಸ್.ಜಿ.ದೇವರಾಜ್, ಬಿ.ಜಿ.ಕವನ, ಜಿ.ಮಧುಕುಮಾರ್, ಕವಿತಾ, ಪರಮೇಶ್, ಸಿಇಒ ಗೀತಾ ಮಧುಕುಮಾರ್ ಇದ್ದರು.