ಮೈಸೂರು: ಮಿದುಳಿನ ಗಡ್ಡೆ ಕ್ಯಾನ್ಸರ್‌ಗೆ ಅತ್ಯಾಧುನಿಕ ಹಾಗೂ ಪರಿಣಾಮಕಾರಿ ಚಿಕಿತ್ಸೆ ಇದೆ. ಹೀಗಾಗಿ ಅಂತಹ ಲಕ್ಷಣ ಕಾಣಿಸಿಕೊಂಡವರು ಕೂಡಲೇ ಹಾಗೂ ನಿಯಮಿತವಾಗಿ ಚಿಕಿತ್ಸೆ ಪಡೆಯುವುದು ಒಳಿತು ಎಂದು ನಗರದ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಾಧವಿ ಸಲಹೆ ನೀಡಿದರು.
ಮಿದುಳಿನ ಯಾವ ಭಾಗದಲ್ಲಿ ಕ್ಯಾನ್ಸರ್ ಗಡ್ಡೆಗಳು ಇವೆ ಎಂಬುದರ ಮೇಲೆ ರೋಗ ಲಕ್ಷಣಗಳು ಇರುತ್ತವೆ. ಸಾಮಾನ್ಯವಾಗಿ ತಲೆನೋವು, ವಾಂತಿ, ದೃಷ್ಟಿ ಮಂದವಾಗುವುದು, ಜ್ಞಾಪಕ ಶಕ್ತಿ ನಷ್ಟ, ಅಸ್ಪಷ್ಟ ಮಾತು, ಕೈ ಮತ್ತು ಕಾಲುಗಳಲ್ಲಿ ದೌರ್ಬಲ್ಯ ಮತ್ತು ದೇಹದಲ್ಲಿ ಅಸಮತೋಲನ ಕಂಡು ಬರುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈಗ ಸ್ಟಿರಿಯೋಟ್ಯಾಕ್ಟಿಕ್ ರೇಡಿಯೋಥೆರಪಿಯಂಥ ನವೀನ ತಂತ್ರಜ್ಞಾನ ಬಳಸಿಕೊಂಡು ಮಿದುಳು ಗಡ್ಡೆಗೆ ಮತ್ತು ಮರುಕಳಿಸಬಹುದಾದ ಮಾರಣಾಂತಿಕ ಗಡ್ಡೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಇದು ರೋಗಿಗಳಲ್ಲಿ ಭರವಸೆ ಮೂಡಿಸುತ್ತದೆ. ಈ ಚಿಕಿತ್ಸಾ ವಿಧಾನ ನಿಖರವಾಗಿ ಗಡ್ಡೆಗೆ ಚಿಕಿತ್ಸೆ ತಲುಪಿಸುತ್ತದೆ ಎಂದು ವಿವರಿಸಿದರು.
ಎಲ್ಲರೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ನಿತ್ಯ 30 ರಿಂದ 40 ನಿಮಿಷ ವ್ಯಾಯಾಮ ಮಾಡಬೇಕು, ಆರರಿಂದ ಎಂಟು ಗಂಟೆ ನಿದ್ರೆ, ಮೊಬೈಲ್ ನೋಡುವ ಸಮಯ ಕಡಿಮೆ ಮಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕು ಎಂದು ವಿವರಿಸಿದರು.
ಆಸ್ಪತ್ರೆ ಸಿಇಇ ಗೌತಮ್ ಧರ್ಮೇಲಾ, ವಿಕರಣ ತಜ್ಞ ಡಾ. ವಿನಯ್‌ಕುಮಾರ್, ಮಾರುಕಟ್ಟೆ ವ್ಯವಸ್ಥಾಪಕ ಆನಂದ್ ಇದ್ದರು.