

ಕೆ.ಆರ್.ಸಾಗರ: ಬೆಳಗೊಳ ಗ್ರಾಮದಲ್ಲಿ ಹೋಬಳಿಯ ರೈತರಿಗೆ ಭತ್ತದ ಬೆಳೆಯಲ್ಲಿ ಸುಧಾರಿತ ತಾಂತ್ರಿಕತೆ ಅಳವಡಿಕೆ ಕುರಿತು ಮಾಹಿತಿ ನೀಡಲಾಯಿತು.
ಮಂಡ್ಯ ಜಿಲ್ಲಾ ಕೃಷಿ ಇಲಾಖೆ, ಸಹಾಯಕ ಜಂಟಿ ನಿರ್ದೇಶಕರ ಕಚೇರಿ, ಶ್ರೀರಂಗಪಟ್ಟಣ, ಕೃಷಿ ವಿಶ್ವವಿದ್ಯಾಲಯ, ಮಂಡ್ಯ ಮತ್ತು ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಂಟಿ ಸಹಯೋಗದಲ್ಲಿ ಗುರುವಾರ ಶ್ರೀ ಆಂಜನೇಯ ಸುಮುದಾಯ ಭವನದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಗೊಳ ಗ್ರಾ.ಪಂ ಅಧ್ಯಕ್ಷ ರವಿಕುಮಾರ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ರೈತರು ರಾಸಾಯನಿಕಗಳನ್ನು ಹೆಚ್ಚು ಬಳಸಿ ಫಸಲು ತೆಗೆಯುತ್ತಾರೆ. ರಾಸಾಯನಿಕಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಕಡಿಮೆ ರಾಸಾಯನಿಕ ಬಳಸಿ ನೈಸರ್ಗಿಕ ಗೊಬ್ಬರ ಬಳಸುವ ಕುರಿತು ಕೃಷಿ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಮಂಡ್ಯ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಮಾತನಾಡಿ, ಭತ್ತದ ಬೆಳೆಗೆ ಕೀಟನಾಶಕಗಳ ಬಳಕೆ ಮತ್ತು ತೇವಾಂಶ ಕಡಿಮೆ ಮಾಡಬೇಕು. ರಸಗೊಬ್ಬರ ಸಮತೋಲನದಲ್ಲಿ ಉಪಯೋಗಿಸಿದಲ್ಲಿ ಭೂಮಿ ಉತ್ತಮವಾಗಿರುತ್ತವೆ ಎಂದರಲ್ಲದೆ, ಜೈವಿಕ ರಸಗೊಬ್ಬರ ಬಳಕೆ, ಲಘು ಪೋಷಕಾಂಶದ ಬಗ್ಗೆ ಸಮಗ್ರವಾಗಿ ವಿವರಿಸಿದರು.
ಮಂಡ್ಯ ಕೃಷಿ ವಿಶ್ವ ವಿದ್ಯಾಲಯದ ಬೇಸಾಯ ಶಾಸ್ತ್ರಜ್ಞ ಡಾ.ದಿನೇಶ್, ಬೇಸಾಯದ ಕ್ರಮ, ಭತ್ತದ ತಳಿಗಳು, ಭತ್ತದ ಬೇಸಾಯದ ಪದ್ಧತಿ, ಕಳೆನಾಶಕದ ಪರಿಣಾಮದ ಬಗ್ಗೆ ಚಿತ್ರ ಸಮೇತ ವಿವರಣೆ ನೀಡಿದರು.
ಕೃಷಿ ತಜ್ಞ ಸನತ್‌ಕುಮಾರ ಕಳೆನಾಶಕ ಪರಿಣಾಮದ ಬಗ್ಗೆ ಸಮಗ್ರವಾಗಿ ವಿವರಿಸಿದರು.
ಇಪ್ರೋ ಕಂಪನಿಯಿಂದ ಡ್ರೋನ್ ಮೂಲಕ ಕಳೆನಾಶಕ ಸಿಂಪಡಿಸುವ ಬಗ್ಗೆ ಚಿತ್ರಗಳ ಮೂಲಕ ಪ್ರಾತ್ಯಕ್ಷಿಕೆ ನೀಡಿ, ರೈತರಿಗೆ ಆಧುನಿಕ ತಂತ್ರಜ್ಞಾನಗಳ ಬಳಕೆಯ ಅರಿವು ಮೂಡಿಸಿದರು.
ಶ್ರೀರಂಗಪಟ್ಟಣ ಸಹಾಯಕ ಕೃಷಿ ನಿದೇರ್ಶಕಿ ಪ್ರಿಯದರ್ಶಿನಿ, ಪಾಂಡವಪುರ ಸಹಾಯಕ ಕೃಷಿ ಉಪನಿರ್ದೇಶಕ ಭಾನುಪ್ರಕಾಶ್, ಬೆಳಗೊಳ ಕೃಷಿ ಅಧಿಕಾರಿ ಶಿಲ್ಪಾ, ಬೆಳಗೊಳ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸುಪ್ರಿಯಾ, ಬೆಳಗೊಳ ಗ್ರಾಮದ ಮುಖಂಡರಾದ ವಿಷಕಂಠೇಗೌಡ, ಶ್ರೀನಿವಾಸೇಗೌಡ, ತಾ.ಪಂ ಮಾಜಿ ಸದಸ್ಯ ಮೇಟಗಳ್ಳಿ ಸೋಮಣ್ಣ, ಮಹದೇವಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸ್ವಾಮಿಗೌಡ, ಬೆಳಗೊಳ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ವಾಸು, ಇಪ್ರೋ ಕಂಪನಿಯ ಸೇರಿದಂತೆ ವಿವಿಧ ಕಂಪನಿ ಅಧಿಕಾರಿಗಳು ರೈತರು ಇದ್ದರು.