ಸೌರಶಕ್ತಿ ಆಧಾರಿತ ಯೋಜನೆ ರಾಜ್ಯಮಟ್ಟಕ್ಕೆ

mkg1a
Published on

ಹರಿಹರ: ಯುನಿಷಪ್(ಯುಎನ್‌ಐಸಿಇಎಫ್) ಸಂಸ್ಥೆಯಿಂದ ಈಚೆಗೆ ನಡೆಸಿದ ಜಿಲ್ಲಾಮಟ್ಟದ ಶಾಲಾ ನಾವೀನ್ಯತಾ ಸ್ಪರ್ಧೆ(ಎಸ್‌ಐಎಫ್)ಯಲ್ಲಿ ತಾಲೂಕಿನ ಕಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಸುಧಾರಿತ ಏತ ನೀರಾವರಿ ಯೋಜನೆ’ ಮಾದರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಪವನಶಕ್ತಿ, ಸೌರಶಕ್ತಿ ಆಧಾರದಲ್ಲಿ ನಡೆಸಲಾಗುವ ಈ ಮಾದರಿಯನ್ನು ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಾದ ವಿಶ್ವನಾಥ್ ಬಿ.ಬಿ., ಉಷಾ ಬಿ.ಎಸ್. ಹಾಗೂ ಲಕ್ಷ್ಮೀ ಅವರು ರಚಿಸಿದ್ದಾರೆ.

ಜು.22ರಿಂದ 25ರ ವರೆಗೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮಾದರಿಯನ್ನು ಪ್ರದರ್ಶಿಸಲಿದ್ದಾರೆ. ಜತೆಗೆ, ಮಾರ್ಗದರ್ಶಿಗಳಾಗಿ ಶಾಲಾ ಶಿಕ್ಷಕರಾದ ಈರಮ್ಮ ಅಂಗರಗಟ್ಟಿ ಮತ್ತು ರಾಮನಗೌಡ ಪ್ಯಾಟಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದಿಂದ ಒಟ್ಟು 12 ಸಾವಿರ ಮಾದರಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 30 ಮಾದರಿ ಆಯ್ಕೆಗೊಂಡಿದ್ದು, ದಾವಣಗೆರೆ ಜಿಲ್ಲೆಯಿಂದ ಕಮಲಾಪುರ ಶಾಲೆಯ ಸುಧಾರಿತ ಏತ ನೀರಾವರಿ ಯೋಜನೆ ಮಾದರಿ ಆಯ್ಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net