ಸಾಧನೆಯ ಹಾದಿಯಲ್ಲಿ ಆತ್ಮ ವಿಶ್ವಾಸದಿಂದ ಮುನ್ನಡೆಯಿರಿ; ಅಂಗವಿಕಲರಿಗೆ ಎಡಿಸಿ ಸೋಮಲಿಂಗ ಗೆಣ್ಣೂರ ಕರೆ

ANGAVIKALA DINACHARANE
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರ ವಿಶ್ವ ದಿನಾಚರಣೆಯನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಉದ್ಘಾಟಿಸಿದರು. ಕೆ.ಕೆ. ಚವಾಣ್, ರಾಜಶೇಖರ ಧೈವಾಡಿ, ಡಿವೈಎಸ್‌ಪಿ ಡಿ.ವೈ. ಧನಗರ, ವಾರ್ತಾಧಿಕಾರಿ ಅಮರೇಶ ದೊಡಮನಿ ಮತ್ತಿತರರಿದ್ದಾರೆ.
Published on

ವಿಜಯಪುರ: ಮನಸ್ಸಿದ್ದರೆ ಮಾರ್ಗ. ಹೀಗಾಗಿ ಜೀವನದಲ್ಲಿ ಸಾಧನೆ ಮಾಡಲು ಮನಸ್ಸು ಮುಖ್ಯ. ಸಾಧನೆಗೆ ಅಂಗವಿಕಲತೆ ಅಡ್ಡಿಯಾಗದು. ಆದ್ದರಿಂದ ಸಾಧನೆಯ ಹಾದಿಯಲ್ಲಿ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಲು ಮನಸ್ಸು ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಕಲಚೇತನರ ವಿಶ್ವ ದಿನಾಚರಣೆ-2024’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಧನೆ ಸಾಧಕನ ಸೊತ್ತು. ದೃಢ ಮನಸ್ಸು ಹೊಂದಿ, ಸಾಧಕರಾಗಿ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು. ಜೀವನದಲ್ಲಿ ಆಶಾಭಾವನೆ ಹೊಂದಿರಬೇಕು. ಸದಾ ಪ್ರಯತ್ನವಾದಿಯಾಗಿರಬೇಕು. ಸತತ ಪ್ರಯತ್ನ ಯಶಸ್ವಿಗೆ ಸಹಕಾರಿಯಾಗಿದೆ. ಜೀವನದಲ್ಲಿ ಸಾಧನೆ ಮಾಡಲು ಮಾನಸಿಕ ದೃಢತೆ ಹೊಂದಬೇಕೆ ಹೊರತು ದೈಹಿಕವಾಗಿ ಅಲ್ಲ. ಮಾನಸಿಕವಾಗಿ ಸದೃಢತೆಯಿಂದ ಸಾಧನೆಯ ಶಿಖರವನ್ನೇರಬಹುದಾಗಿದೆ ಎಂದು ಅವರು ಹೇಳಿದರು.

ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರ ಜೀವನ ಸ್ಪೂರ್ತಿಯಾಗಿಟ್ಟುಕೊಂಡು ಸಾಧನೆಗೆ ಮುಂದಾಗಬೇಕು. ಅಂಗವಿಕಲರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲಾಡಳಿತವೂ ಅಂಗವಿಕಲರ ಕುಂದು ಕೊರತೆಗಳಿಗೆ ಸದಾ ಸ್ಪಂದಿಸುತ್ತದೆ. ಶಿಸ್ಸು ಬದ್ಧ ಜೀವನ ನಡೆಸುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ. ಚವಾಣ್ ಮಾತನಾಡಿ, ಅಂಗವಿಕಲರಿಗಾಗಿಯೇ ಇರುವ ಸರ್ಕಾರದ ಸೌಲಭ್ಯಗಳನ್ನು-ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಸವಿತಾ ಕಾಳೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ ಮಾತನಾಡಿದರು. ಡಿಎಆರ್ ಡಿವೈಎಸ್‌ಪಿ ಡಿ.ವೈ. ಧನಗರ, ವಾರ್ತಾಧಿಕಾರಿ ಅಮರೇಶ ದೊಡಮನಿ, ನಿಮಿಷ ಆಚಾರ್ಯ, ವಿನೋದ ಖೇಡ, ರಶ್ಮಿ ಚಿತ್ತವಾಡಗಿ, ಫಾದರ್ ಟಿಯೋಲ್ ಮಚಾದೋ ಮತ್ತಿತರರಿದ್ದರು.

ಸಾಧಕರಾದ ರಾಜೇಶ ಪವಾರ, ಬಂದೇನವಾಜ ಕಲ್ಲೂರ, ಮೋದಿನ ಪಾಶ, ಅಶೋಕ ವಾಲಿಕಾರ, ಶಶಿಕಲಾ ಸೋನಾರ, ಸುಮೀತ ಪಾಂಡಿಚೇರಿ, ಸಂಜೀವ ಭವನಸಿಂಗ್ ಹಜೇರಿ, ಅಂಬಣ್ಣಾ ಗುನ್ನಾಪುರ, ರಶ್ಮಿ ಚಿತ್ತವಾಡಗಿ, ಮೌಲಾಲಿಕ ಮಂಟೂರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಸಿದ್ಧೇಶ್ವರ ದೇವಸ್ಥಾನದಿಂದ ಕಂದಗಲ್ಲ ಹನುಮಂತರಾಯ ರಂಗಮಂದಿರದವರೆಗೆ ಇಂಧನ ಚಾಲಿತ ತ್ರಿ-ಚಕ್ರ ವಾಹನ ಜಾಥಾ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net