ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆಗೆ ಮುಂದಾಗಿ: ಶಾಸಕ ಜಿ.ಟಿ.ದೇವೇಗೌಡ ಸಲಹೆ

25
Published on

ಮೈಸೂರು: ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶದಲ್ಲಿ ಹಸಿ-ಒಣ ಕಸವನ್ನು ವಿಂಗಡಣೆ ಮಾಡಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಮೈಸೂರು ತಾಲೂಕು ನಾಗವಾಲ ಗ್ರಾಮದಲ್ಲಿ ಹಸಿರು ದಳ, ಆಶ್ರಯ ಹಸ್ತ ಟ್ರಸ್ಟ್ ಸಹಯೋಗದೊಂದಿಗೆ ಸುಸ್ಥಿರ ಕಸ ನಿರ್ವಹಣಾ ಘಟಕ ಹಾಗೂ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕಲ್ಪನೆಯ ಕನಸು ನನಸಾಗಬೇಕಾದರೆ ಗ್ರಾಮ ಪಂಚಾಯಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ನಗರ ಪ್ರದೇಶಗಳಂತೆ ಗ್ರಾಮೀಣ ಭಾಗದಲ್ಲೂ ಕಸ ವಿಂಗಡಣೆ ಕಾರ್ಯ ನಡೆದು ಪರಿಸರ ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.

ಇಡೀ ದೇಶದಲ್ಲಿ ಸ್ವಚ್ಛತೆ ಮಹತ್ವ ಪಡೆದುಕೊಂಡಿದೆ. ಗಾಂಧೀಜಿ ಅವರು ಶ್ರಮದಾನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಪೊರಕೆ ಹಿಡಿದು ಕಸ ಸ್ವಚ್ಛಗೊಳಿಸಿ ಸ್ವಚ್ಛ ಭಾರತ್ ಆಂದೋಲನ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುವಂತೆ ಮಾಡಿದರು. ಈಗ ಹಳ್ಳಿಗಳಲ್ಲೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡುತ್ತಿದೆ. ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡುವ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಬೇಕು. ವಿದ್ಯಾರ್ಥಿಗಳ ನೆರವಿನಿಂದ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಬೇಕು. ಹಸಿ ಕಸದಿಂದ ಎರೆಹುಳು, ಕಾಂಪೋಸ್ಟ್ ಮೊದಲಾದ ವಸ್ತುಗಳನ್ನು ತಯಾರಿಸಬಹುದು. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಬಳಕೆಮಾಡಿಕೊಂಡು ಅನೇಕ ರೀತಿಯ ಸ್ಥಳೀಯ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡಬಹುದು. ಈ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.

ಕೇವಲ ನಮ್ಮ ಮನೆಯೊಂದನ್ನು ಸ್ವಚ್ಛವಾಗಿಟ್ಟರೆ ಪ್ರಯೋಜನವಾಗಲ್ಲ. ನಮ್ಮ ಬೀದಿ, ಊರನ್ನು ಸ್ವಚ್ಛವಾಗಿರಿಸಿದರೆ ಆರೋಗ್ಯ ಸಮಾಜವಾಗಲಿದೆ. ಮಕ್ಕಳು ಆರೋಗ್ಯಕರವಾಗಿದ್ದು ಉತ್ತಮ ವ್ಯಕ್ತಿತ್ವ, ನಾಯಕತ್ವವನ್ನು ಹೊಂದಲು ಸಹಕಾರಿಯಾಗಲಿದೆ. ಭವಿಷ್ಯದ ನಾಯಕತ್ವ ರೂಪುಗೊಳ್ಳುವುದು ಹಳ್ಳಿಯ ಕೆಲಸದಿಂದಲೇ ಎನ್ನುವುದನ್ನು ಮರೆಯಬಾರದು ಎಂದರು.

ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರದಿಂದ ನೇರವಾಗಿ ಅನುದಾನ ಹೊರತುಪಡಿಸಿದರೆ ಜಿಲ್ಲಾ, ತಾಲೂಕು, ರಾಜ್ಯ ಸರ್ಕಾರದಿಂದ ಬರುವ ಅನುದಾನ ಸ್ಥಗಿತಗೊಂಡಿದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಳ್ಳಬೇಕು. ಶಾಲಾ, ಅಂಗನವಾಡಿ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ನರೇಗಾ ಅನುದಾನ ಶಾಶ್ವತವಾಗಿ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಯೋಜನೆ ಅನುದಾನ ಬಾರದಿದ್ದರೆ ಕುಡಿಯುವ ನೀರು ಕೊಡುವುದಕ್ಕೂ ಕಷ್ಟವಾಗಲಿದೆ. ಹಾಗಾಗಿ ತಮ್ಮ ಪಂಚಾಯಿತಿ ವ್ಯಾಪ್ತಿಗೆ ಆಗಬೇಕಿರುವ ಕೆಲಸಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಒಪ್ಪಿಗೆ ಪಡೆಯಬೇಕು. ನಮಗೆ ಪಂಚಾಯಿತಿ ಮಟ್ಟದಿಂದಲೂ ಸಾಕಷ್ಟು ದೂರುಗಳು ಬರುತ್ತವೆ. ಗ್ರಾಪಂ ಸದಸ್ಯರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಮೈಸೂರು ನಗರದ ಸುತ್ತಮುತ್ತಲ ಗ್ರಾಮಗಳಲ್ಲಿ ಇದ್ದ ಜಮೀನನ್ನು ರೈತರು ಮಾರಾಟ ಮಾಡಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಮದುವೆ ಮಾಡಲು ಒಂದು ಎಕರೆಗೆ 5 ರಿಂದ 10 ಲಕ್ಷ ರೂ.ಗೆ ಮಾರಿಕೊಂಡಿದ್ದಾರೆ. ಈಗ ಒಂದು ಕೋಟಿ ರೂ.ಬೆಲೆ ಬಾಳುತ್ತದೆ ಅಂತ ಹೇಳಿದರೆ ಏನು ಪ್ರಯೋಜನ. ಹಾಗಾಗಿ ಜಮೀನು ಮಾರದೆ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಕೃಷ್ಣ, ನಾಗವಾಲ ಗ್ರಾಪಂ ಅಧ್ಯಕ್ಷೆ ಕಾಮಾಕ್ಷಮ್ಮ ಬಸವನಾಯಕ, ಮಾಜಿ ಅಧ್ಯಕ್ಷ ಆರ್.ನರೇಂದ್ರ, ಆಶ್ರಯ ಹಸ್ತ ಟ್ರಸ್ಟ್ ನಿರ್ದೇಶಕ ಎನ್.ಕೆ.ಶರ್ಮಾ, ಹಸಿರುದಳ ಸಂಸ್ಥೆ ನಿರ್ದೇಶಕಿ ನಳಿನಿ ಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net