

ತುಮಕೂರು: ಭಾರತವನ್ನು ಸುಭದ್ರವನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನವಭಾರತ ನಿಮಾರ್ಣಕ್ಕೆ ಯುವಜನತೆ ಮುಂದಾಗಬೇಕು ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಹೇಳಿದರು.
ತುಮಕೂರು ವಿವಿ ಕಲಾ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದಿಂದ ಗುರುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 162ನೇ ಜನ್ಮ ಮಹೋತ್ಸವದ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶಕ್ಕೋಸ್ಕರ ಜೀವನದುದ್ದಕ್ಕೂ ಪ್ರಾರ್ಥನೆ ಮಾಡಿ, ದೇಶವು ಪಾಶ್ಚಿಮಾತ್ಯರ ಹಿಡಿತದಿಂದ ಮುಕ್ತಿ ಪಡೆಯಬೇಕು ಎಂದು ಹೋರಾಡಿದ ಮಹಾನ್ ವ್ಯಕ್ತಿ ವಿವೇಕಾನಂದರು ಎಂದರು. ನನ್ನ ದೇಶಕ್ಕೆ
ನಾನು ಏನು ಮಾಡಬಲ್ಲೆ? ನನ್ನ ಸಂಸತಿಗೆ ನನ್ನ ಕೊಡುಗೆ ಏನು? ಎಂದು ನೀವೇ ಪ್ರಶ್ನಿಸಿಕೊಳ್ಳಿ. ಮಂಗಳಕ್ಕೆ ಹೋದ ನಾವು ಮನದ ಅಂಗಳಕ್ಕೆ ಹೋಗುವುದಕ್ಕೆ ವಿಫಲ ಆಗುತ್ತಿದ್ದೇವೆ. ಶಾಲೆಯ ಶಿಕ್ಷಣದಲ್ಲಿ ಅಗತ್ಯ ವಿಚಾರಗಳಿಗಿಂತ ಅನಗತ್ಯ ವಿಚಾರಗಳನ್ನು ತುಂಬುತ್ತಿದ್ದಾರೆ. ಸ್ವಾಮಿ ವಿವೇಕಾನಂದರವರ ವಿಚಾರಧಾರೆ ಕಣಕಣದಲ್ಲಿ ಬರಬೇಕು, ಯುವಜನತೆ ಶಕ್ತಿಯ ಜ್ವಾಲೆಗಳಾಗಬೇಕು ಎಂದರು.
ಶಿಕ್ಷಣ ತಜ್ಞೆ ಕೆ.ಆರ್.ಪದ್ಮಿನಿ ಮಾತನಾಡಿ, ಸ್ವಾಮಿ ವಿವೇಕಾನಂದರು ಪರೀಕ್ಷಿಸದೆ ಯಾವುದನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ. ಏಕಾಗ್ರತೆ ಎಂಬುದು ಜೀವನದ ಮುಖ್ಯ ಘಟಕ. ಆ ಶಕ್ತಿ ನಮ್ಮೊಳಗೆ ಇದೆ ನಾವು ಏನು ಬೇಕಾದರೂ ಸಾಧಿಸಬಹುದು, ಶಕ್ತಿಯ ಗಣಿಗಳಾಗಿ ಒಳ್ಳೆಯ ವಿಚಾರಗಳಿಗೆ ಕಿವಿ ಕೊಡಿ ಆತ್ಮವಿಶ್ವಾಸದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದರು.
ವಿವೇಕವಂಶಿ ಸಂಸ್ಥೆ ನಿತ್ಯಾನಂದ ವಿವೇಕವಂಶಿ ಮಾತನಾಡಿ, ದೇಶ ಬದಲಿಸಬೇಕೆಂದರೆ ಮೊದಲು ಮನುಷ್ಯರನ್ನು ಬದಲಾಯಿಸಬೇಕು. ವಿವೇಕಾನಂದ ಅವರನ್ನು ಎಲ್ಲ ದೇಶಗಳು ಒಪ್ಪಿಕೊಳ್ಳುತ್ತವೆ. ಆಂತರಿಕವಾಗಿ ಬಲಿಷ್ಟರಾಗಿ ಪ್ರತಿಯೊಂದು ಆತ್ಮವು ಆಂತರ್ಯದಲ್ಲಿ ಜೀವಂತವಾಗಿದೆ. ಅದು ಅದಮ್ಯ ಶಕ್ತಿಯ ಗಡಿಯಾಗಬೇಕು ಎಂದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿವೇಕಾನಂದರು ತಮ್ಮ ಸ್ವಾರ್ಥದ ಬಗ್ಗೆ ಚಿಂತಿಸಿರಲಿಲ್ಲ. ಸದಾ ದೇಶದ ಶಕ್ತಿಯನ್ನು ಪ್ರೇರೇಪಿಸಿದರು. ನಾವು ನಮ್ಮ ಶಕ್ತಿಯನ್ನು ದೇಶಕ್ಕೆ ಹೇಗೆ ಹಂಚಿಕೆ ಮಾಡಬೇಕು ಎಂದು ತಿಳಿಸಿ ಕೊಟ್ಟವರು ಅವರು. ಅಸಾಧಾರಣ ವಿಚಾರಗಳನ್ನು ಚಿಂತಿಸುವ ವ್ಯಕ್ತಿ ಮಹಾಪುರುಷನಾಗುತ್ತಾನೆ. ಯುವಜನತೆ ಅಂತರಂಗದ ಶಕ್ತಿಯನ್ನು ಹೆಚ್ಚಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಬೇಕು ಎಂದರು. ತುಮಕೂರು ವಿವಿಯ ಕುಲಸಚಿವೆ ನಾಹಿದ ಜಮ್ ಜಮ್, ಕಲಾ ಕಾಲೇಜು ಪ್ರಾಚಾರ್ಯ ಪ್ರೊ.ಬಿ.ಕರಿಯಣ್ಣ, ವಿವೇಕಾನಂದ ಅಧ್ಯಯನ ಪೀಠ ಸಂಯೋಜಕ ಡಾ.ಚೇತನ್ ಪ್ರತಾಪ್ ಇದ್ದರು.