

ಯಲ್ಲಾಪುರ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದೂರದ ಊರಿಗೆ ಪ್ರಯಾಣ ಮಾಡುವವರು ಮುಂಚಿತವಾಗಿ ಟಿಕೆಟ್ ಬುಕ್ ಮಾಡುವ ವ್ಯವಸ್ಥೆ ಇದ್ದೂ, ಪ್ರಯಾಣಿಕರಿಗೆ ಸೌಲಭ್ಯ ಸಿಗದಂತಾಗಿದೆ. ಕಂಪ್ಯೂಟರ್ ಹಾಳಾಗಿ ಆನ್‌ಲೈನ್ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನ ಪ್ರಯಾಣಿಕರಿಂದ ವ್ಯಕ್ತವಾಗುತ್ತಿದೆ.
ಮುಂಗಡ ಟಿಕೆಟ್ ವ್ಯವಸ್ಥೆ ಲಭ್ಯವಿದೆ ಎಂಬ ಫಲಕ ಮಾತ್ರ ದೊಡ್ಡದಾಗಿ ಇದೆ. ಕೌಂಟರ್ ಬಳಿ ಹೋಗಿ ವಿಚಾರಿಸಿದರೆ, ’ಕಂಪ್ಯೂಟರ್ ಹಾಳಾಗಿದೆ, ಮುಂಗಡ ಟಿಕೆಟ್ ವ್ಯವಸ್ಥೆ ಇಲ್ಲ. ಪ್ರಯಾಣಿಸುವಾಗ ಬಸ್‌ನಲ್ಲೇ ಟಿಕೆಟ್ ತೆಗೆದುಕೊಳ್ಳಿ’ ಎಂಬ ಸಿದ್ಧ ಉತ್ತರ ಅಲ್ಲಿನ ಅಧಿಕಾರಿಗಳಿಂದ ಬರುತ್ತದೆ.
ತಾಂತ್ರಿಕ ವ್ಯವಸ್ಥೆ ಸರಿಪಡಿಸಲು ಸಮಯ ತಗುಲಬಹುದು ಎಂಬ ಕಾರಣಕ್ಕೆ ಒಂದು ವಾರವೋ, ಹದಿನೈದು ದಿವಸವೋ ಇಂತಹ ಅವ್ಯವಸ್ಥೆ ಉಂಟಾದರೆ ಪ್ರಯಾಣಿಕರು ಸಹಿಸಿಕೊಳ್ಳಬಹುದು. ಆದರೆ ಇದು ವಾರ, ಹದಿನೈದು ದಿವಸದ ಕಥೆಯಲ್ಲ. ವರ್ಷವಿಡೀ ಇದೇ ಅವ್ಯವಸ್ಥೆ ಇರುತ್ತದೆ. ಹಾಳಾದ ಕಂಪ್ಯೂಟರ್ ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗುತ್ತಿಲ್ಲ ಎಂಬುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾದ ಸಂಗತಿ.
ಮುಂಗಡ ಟಿಕೆಟ್ ಬುಕಿಂಗ್ ಮಾಡುವುದಿಲ್ಲ ಎಂದಾದರೆ ಆ ವ್ಯವಸ್ಥೆ ಇರುವ ಬಗೆಗಿನ ಮಾಹಿತಿ ಫಲಕವಾದರೂ ಏಕೆ, ಅದಕ್ಕೊಂದು ಪ್ರತ್ಯೇಕ ಕೌಂಟರ್ ಮಾಡಿರುವುದು ಏಕೆ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
ಸರ್ಕಾರದಿಂದ ನೀಡಿರುವ ಈ ವ್ಯವಸ್ಥೆಯನ್ನು ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು. ಅದಕ್ಕೆ ಹಾಳಾಗಿರುವ ಕಂಪ್ಯೂಟರ್ ಸರಿಪಡಿಸಿ, ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸುವ ಇಚ್ಛಾಶಕ್ತಿಯನ್ನು ಅಧಿಕಾರಿಗಳು ತೋರಬೇಕಿದೆ.
ಸದ್ಯದಲ್ಲೇ ಸರಿಪಡಿಸಿತ್ತೇವೆ!
ಹಾಳಾದ ಕಂಪ್ಯೂಟರ್ ಯಾವಾಗ ದುರಸ್ತಿ ಆಗಲಿದೆ ಎಂದು ಕೇಳಿದರೆ, ಕೌಂಟರ್‌ನಲ್ಲಿರುವ ಅಧಿಕಾರಿಗಳಿಂದ ಹಿಡಿದು, ಘಟಕ ವ್ಯವಸ್ಥಾಪಕರವರೆಗೂ ’ಸದ್ಯದಲ್ಲೇ ದುರಸ್ತಿ ಮಾಡಿಸಲಾಗುವುದು’ ಎಂಬ ಉತ್ತರ ನೀಡುತ್ತಾರೆ. ಆದರೆ ಅದಕ್ಕೆ ಮುಹೂರ್ತ ಮಾತ್ರ ಕೂಡಿ ಬರುತ್ತಿಲ್ಲ.
ಅಧಿಕಾರಿಗಳಿಗೆ ಜನರ ಕುಂದು ಕೊರತೆಗಳಿಗೆ ಸ್ಪಂದಿಸುವ ಮನೋಭಾವ ಇಲ್ಲದಿರುವುದು ಇಂತಹ ಅವ್ಯವಸ್ಥೆಗೆ ಕಾರಣವಾಗಿದೆ. ಸರ್ಕಾರಿ ಬಸ್ ವ್ಯವಸ್ಥೆ ಸರಿ ಇಲ್ಲ ಎಂಬ ದೂರಿನ ನಡುವೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಂಸ್ಥೆಯ ಹೆಸರು ಇನ್ನಷ್ಟು ಹಾಳಾಗುತ್ತಿದೆ. ಬುಚ್ಚಣ್ಣ ಯಾಮಕೆ, ಸಾಮಾಜಿಕ ಕಾರ್ಯಕರ್ತ