

ವಿಜಯವಾಣಿ ಸುದ್ದಿಜಾಲ ಕಟೀಲು
ಆತ್ಮರಕ್ಷಣೆಯ ಕಲೆಯಾಗಿ ಕರಾಟೆ ವಿಶ್ವವ್ಯಾಪಿ ವಿಸ್ತಾರ ಕಾಣುತ್ತಿದ್ದು, ಶ್ರದ್ಧೆ ಮತ್ತು ಇಚ್ಛಾಶಕ್ತಿಯಿದ್ದರೆ ಕರಾಟೆಯಲ್ಲೂ ಉನ್ನತ ಸಾಧನೆ ಸಾಧ್ಯ. ಸ್ವಯಂ ಸಾಧನೆ, ಮೌಲ್ಯಮಾಪನದ ಅರಿವು ಕರಾಟೆ ಪಟುಗಳಲ್ಲಿ ಅಗತ್ಯ. ಯಾರಿಗೂ ದೈಹಿಕ ಮತ್ತು ಮಾನಸಿಕವಾಗಿ ಘಾಸಿಗೊಳಿಸುವುದು ಕರಾಟೆಯ ಪಠ್ಯವಲ್ಲ. ಶಿಸ್ತುಬದ್ಧತೆಯೇ ಇಲ್ಲಿ ಮುಖ್ಯ ಎಂದು ಸೌತ್ ಏಷ್ಯನ್ ಕರಾಟೆ ಫೆಡರೇಶನ್ ಅಧ್ಯಕ್ಷ ಭರತ್ ಶರ್ಮಾ ಹೇಳಿದರು.
ಕಟೀಲು ನಿಕೇತನ ಸಭಾಂಗಣದಲ್ಲಿ ಶನಿವಾರ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಆಶ್ರಯದಲ್ಲಿ ಪ್ರಾರಂಭಗೊಂಡ ಎರಡು ದಿನಗಳ ಅಡ್ವಾನ್ಸ್ ಕುಮಿಟೆ ಸೆಮಿನಾರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಶಿಬಿರ ಉದ್ಘಾಟಿಸಿ ಮಾತನಾಡಿ, ವಿಶ್ವಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಕರಾಟೆ ಕಲಿಕೆಗೆ ಗ್ರಾಮೀಣ ಮಟ್ಟದಲ್ಲಿಯೂ ಹೆಚ್ಚಿನ ಒಲವು ಕಂಡುಬರುತ್ತಿರುವುದು ಶ್ಲಾಘನೀಯ ಎಂದರು.
ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಇಂಡಿಯನ್ ಕರಾಟೆ ಅಸೋಸಿಯೇಷನ್ ಪದಾಧಿಕಾರಿಗಳಾದ ರಾಜೇಂದ್ರ ಸಿಂಗ್ ತೋಮರ್, ಮಧುಫ ಪಾಟೀಲ್, ಸುರೇಂದ್ರ ಉಪಸ್ಥಿತರಿದ್ದರು. ರಾಜೇಂದ್ರ ಸಿಂಗ್ ಪ್ರಾಸ್ತಾವಿಕ ಮಾತನಾಡಿದರು. ಶಿಬಿರದ ಸಂಯೋಜಕ ಹಾಗೂ ಇಂಡಿಯನ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ಕರಾಟೆ ಶಿಕ್ಷಕ ಮೋರ್ಗನ್ ವಿಲಿಯಮ್ಸ್ ವಂದಿಸಿದರು.