ಮುಂಗಡ ಗೌರವಧನ: ಗ್ರಾಪಂ ಪ್ರತಿನಿಧಿಗಳಿಗಾಗಿ 34.53 ಕೋಟಿ ರೂ. ಬಿಡುಗಡೆ

Garama
Published on

ಕುಷ್ಟಗಿ (ಕೊಪ್ಪಳ): ಅಧಿಕಾರಾವಧಿ ಪೂರ್ಣಗೊಳಿಸುತ್ತಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಉಳಿದ ಮೂರು ತಿಂಗಳ ಗೌರವಧನವನ್ನು ಮುಂಗಡವಾಗಿ ಪಾವತಿಸಲು ಸರ್ಕಾರ ನಿರ್ಧರಿಸಿದ್ದು, 34.53 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಆದೇಶಿಸಿದೆ. 2019-20ನೇ ಆರ್ಥಿಕ ವರ್ಷದ 2020ರ ಜನವರಿಯಿಂದ ಮಾರ್ಚ್ ವರೆಗಿನ ಮಾಸಿಕ ಗೌರವಧನವನ್ನು ಸದ್ಯ ಪಾವತಿಸಲಾಗುತ್ತಿದೆ. ಬಿಡುಗಡೆ ಮಾಡಿರುವ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸದೆ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಗೌರವಧನ ಪಾವತಿಗೆ ಮಾತ್ರ ಬಳಕೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.

ಗ್ರಾಪಂ ಅಧ್ಯಕ್ಷರ ಮಾಸಿಕ 3 ಸಾವಿರದಂತೆ ತಲಾ 9 ಸಾವಿರ ರೂ., ಉಪಾಧ್ಯಕ್ಷರ ಮಾಸಿಕ 2 ಸಾವಿರ ರೂ.ದಂತೆ ತಲಾ 6 ಸಾವಿರ ರೂ. ಹಾಗೂ ಸದಸ್ಯರ ಮಾಸಿಕ 1 ಸಾವಿರ ರೂ.ದಂತೆ ತಲಾ 3 ಸಾವಿರ ರೂ.ಗಳನ್ನು ಆಯಾ ಗ್ರಾಪಂ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಜಿಪಂ ಸಿಇಒಗಳು ತಮ್ಮ ವ್ಯಾಪ್ತಿಯ ಗ್ರಾಪಂಗಳ ಚುನಾಯಿತ ಪ್ರತಿನಿಧಿಗಳ ನಿಖರ ಸಂಖ್ಯೆ ಗಣನೆಗೆ ತಗೆದುಕೊಂಡು ಪ್ರತಿ ಗ್ರಾಪಂಗೆ ನೀಡಬೇಕಾಗಿರುವ ಮೊತ್ತವನ್ನು ಲೆಕ್ಕ ಹಾಕಿ, ಅಂತಹ ಮೊತ್ತವನ್ನು ಆಯಾ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಗೌರವಧನ ಪಾವತಿಗೆ ಕ್ರಮ ಕೈಗೊಳ್ಳಬೇಕಿದೆ. ಗೌರವಧನವನ್ನು ಸಕಾಲದಲ್ಲಿ ತುರ್ತಾಗಿ ಪಾವತಿಸಬೇಕಿದ್ದು, ತಾಂತ್ರಿಕ ದೋಷ ಕಂಡುಬಂದಲ್ಲಿ ಖಜಾನೆ ಅಧಿಕಾರಿಗಳು ಖುದ್ದು ಹಾಜರಾಗಿ ದೋಷ ಸರಿಪಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ(ಜಿಪಂ) ಸಿ.ಮಂಜೂರ್ ಫೆ.1ರಂದು ಸುತ್ತೋಲೆ ಹೊರಡಿಸಿದ್ದಾರೆ.

| ವಿಶ್ವನಾಥ ಸೊಪ್ಪಿಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net