

ಸುಬ್ರಹ್ಮಣ್ಯ: ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ರಾವೇಶ್ವರ ಮಹಾಸ್ವಾಮಿಗಳ ಪೂರ್ಣ ಅನುಗ್ರಹದೊಂದಿಗೆ ಬಾನ್ಕುಳಿ ಮಠದಲ್ಲಿ ಜರುಗಲಿರುವ ಶಂಕರ ಪಂಚಮಿಯ ಪೂರ್ವಭಾವಿಯಾಗಿ ಸಂಚರಿಸುತ್ತಿರುವ ಶ್ರೀ ಶಂಕರ ಮಹಾಪಾದುಕಾ ಅದ್ವೈತ ರಥ ಆಗಮಿಸಿತು.
ಶ್ರೀ ಶಂಕರ ಭಗವತ್ಪಾದರ ದಿವ್ಯ ಸಂದೇಶವನ್ನು ಜನಮನಕ್ಕೆ ಸಾರುತ್ತಾ ಸಂಚರಿಸುತ್ತಿರುವ ಶ್ರೀ ಶಂಕರ ಮಹಾಪಾದುಕಾ ಅದ್ವೈತ ರಥವನ್ನು ಪಂಜ ದೇಗುಲದಲ್ಲಿ ಸ್ವಾಗತಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಮತ್ತು ಮಹೇಶ್ ಭಟ್ ಕುಡುಪಿಲ ಶ್ರೀಪಾದುಕೆಗೆ ಹಾರಾರ್ಪಣೆ ಮಾಡಿದರು. ಶ್ರೀ ಪಾದುಕಾ ಪೂಜೆಯನ್ನು ದೇಗುಲದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ನೆರವೇರಿಸಿದರು. ಭಕ್ತರು ಪುಷ್ಪಾರ್ಚನೆ ಮಾಡಿದರು.
ಹವ್ಯಕ ವಲಯ ಕಾರ್ಯದರ್ಶಿ ಶಿವಕುವಾರ ಬಿಳಿನೆಲೆ, ಉಪಾಧ್ಯಕ್ಷ ಶ್ರೀಶ ಭಟ್ ಕರಿಕಳ, ಪ್ರಮುಖರಾದ ಪ್ರಸನ್ನ ಭಟ್ ಕುಂಞಹಿತ್ಲು, ಡಾ.ವೆಂಕಟೇಶ್ ಮಂಜುಳಗಿರಿ ಮೊದಲಾದವರಿದ್ದರು.