

ಮುಳ್ಳೇರಿಯ: ಕುಂಬಳೆ ಸೀಮೆಯ ಪ್ರಧಾನ ನಾಲ್ಕು ದೇವಾಲಯಗಳಲ್ಲಿ ಒಂದಾದ ಅಡೂರು ಶ್ರೀಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಾಲಯದ ಕೌಡಿಂಕಾನ ಯಾತ್ರೆ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಆಶೀರ್ವಾದಗಳೊಂದಿಗೆ, ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಮಂಗಳವಾರ ಸಂಪನ್ನಗೊಂಡಿತು.
ಕೆಲವು ದಿನಗಳಿಂದ ನಡೆಯುತ್ತಿದ್ದ ವಿಧಿವಿಧಾನಗಳ ಬಳಿಕ ಮಂಗಳವಾರ ಮುಂಜಾನೆ 3ಕ್ಕೆ ನಡೆ ತೆರೆದು ಕೊಡಿಮರದಡಿ ಮಹಾಪ್ರಾರ್ಥನೆ, ಬಳಿಕ ಕೌಂಡಿಂಕಾನ ಯಾತ್ರಾರಂಭ ನಡೆಯಿತು. ವಾಸುದೇವ ತಂತ್ರಿ ಕುಂಟಾರು, ರವೀಶ ತಂತ್ರಿ ಕುಂಟಾರು, ಪ್ರಮುಖರು ಯಾತ್ರೆಯ ಮುಂಚೂಣಿ ವಹಿಸಿದ್ದರು.
ಬಳಿಕ ಮೂಲಸ್ಥಾನದಿಂದ ಮೃತ್ತಿಕಾ ಸಂಗ್ರಹ, ಶ್ರೀಕ್ಷೇತ್ರಕ್ಕೆ 11ರ ವೇಳೆಗೆ ಪುನರಾಗಮನ ನಡೆಯಿತು. ಬೆಳಗ್ಗೆ 6 ರಿಂದ ಮಧ್ಯಾಹ್ನದ ತನಕ ಭಜನಾ ಸಂಕೀರ್ತನೆ, ಶ್ರೀಕ್ಷೇತ್ರದಲ್ಲಿ ಬಿಂಬ ಚೈತನ್ಯ ವೃದ್ಧಿ, ಧನುಪೂಜೆ, ಸಹಸ್ರ ಕುಂಭಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಮೂಲ ಮೃತ್ತಿಕಾ ಪ್ರಸಾದ ವಿತರಣೆ, ಮಹಾಮಂತ್ರಾಕ್ಷತೆ ನಡೆಯಿತು.
ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಾಸುದೇವ ತಂತ್ರಿಗಳಿಗೆ ಗೌರವಾರ್ಪಣೆ ನಡೆಯಿತು. ರಾತ್ರಿ ಶ್ರೀದೇವರ ಉತ್ಸವ ಬಲಿ ನಡೆಯಿತು. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಯಾತ್ರೆ ವೀಕ್ಷಿಸಲು ಕರ್ನಾಟಕ-ಕೇರಳದಿಂದ ಐವತ್ತು ಸಾವಿರಕ್ಕಿಂತಲೂ ಅಧಿಕ ಭಕ್ತರು ಸೇರಿದ್ದರು.