

ಲಿಂಗಸುಗೂರು: ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಬಯ್ಯಪುರ ಕಾರಣರಾಗಿದ್ದು, ಬೆನ್ನಿಗೆ ಚೂರಿ ಹಾಕಿದ್ದಾರೆಂದು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಹೇಳಿಕೆ ನೀಡಿದ್ದಾರೆ. ನಾನು ಕಾಂಗ್ರೆಸ್‌ಗೆ ದ್ರೋಹವೆಸಗಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಮಾಜಿ ಶಾಸಕ ಅಮರೇಗೌಡ ಬಯ್ಯಪುರ ಹೇಳಿದರು.
ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲಿಂಗಸುಗೂರು ಕ್ಷೇತ್ರದಲ್ಲಿ ಡಿ.ಎಸ್.ಹೂಲಗೇರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ ಶಾಸಕರಾಗಿಸಲು ನಮ್ಮ ಕುಟುಂಬ ಪ್ರಾಮಾಣಿಕವಾಗಿ ಶ್ರಮ ಪಟ್ಟಿದೆ. ಕಳೆದ ಚುನಾವಣೆಯಲ್ಲಿ ಡಿ.ಎಸ್.ಹೂಲಗೇರಿಗೆ ಟಿಕೇಟ್ ನೀಡಬೇಕೆಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಗೆ ಒತ್ತಡ ಹಾಕಿದ್ದೆ ಎಂದರು.
ಲಿಂಗಸುಗೂರು ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಅಥವಾ ಡಿ.ಎಸ್.ಹೂಲಗೇರಿ ವಿರುದ್ಧ ಕೆಲಸ ಮಾಡುವಂತೆ ನಾನು ಯಾರಿಗೂ ಹೇಳಿಲ್ಲ. ಆದರೂ ಸಹ ಹೂಲಗೆರಿ ಪದೇ ಪದೆ ನಮ್ಮ ಹೆಸರು ಪ್ರಸ್ತಾಪಿಸುತ್ತಿರುವುದು ನೋವು ತಂದಿದೆ. ಚುನಾವಣೆಯಲ್ಲಿ ಸೋತ ಬಳಿಕ ಕೆಲ ವೇದಿಕೆಗಳಲ್ಲಿ ಎಂಎಲ್ಸಿ ಶರಣಗೌಡ ಬಯ್ಯಪುರ ಹಾಗೂ ಮುಖಂಡ ಶರಣಪ್ಪ ಮೇಟಿ ಸೇರಿ ಇತರರು ನನ್ನ ಸೋಲಿಗೆ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಸೋತ ಬೇಸರದಲ್ಲಿ ಹೇಳಿರಬಹುದೆಂದು ಸುಮ್ಮನಿದ್ದೆ. ಆದರೆ ಇತ್ತಿಚಿಗೆ ಸಚಿವ ಎನ್.ಎಸ್.ಬೋಸರಾಜು ಸನ್ಮಾನ ಸಮಾರಂಭದಲ್ಲೂ ನನ್ನ ಹೆಸರು ಪ್ರಸ್ತಾಪಿಸಿರುವುದು ಸರಿಯಲ್ಲ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಬಗ್ಗೆ ದಾಖಲೆ ಸಮೇತ ಸಾಬೀತು ಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಯ್ಯಪುರ ಎಚ್ಚರಿಕೆ ನೀಡಿದರು.