

ಮಂಗಳೂರು: ಬಿಜೈ ಕಾಪಿಕಾಡು ನಿವಾಸಿ ಗೃಹಿಣಿ ಮಸಾಲೆ ಉತ್ಪನ್ನಗಳ ಮಾಲಿಕ ಕೆ.ಸೂರ್ಯನಾರಾಯಣ ರಾವ್ ಯಾನೆ ಅಡುಗೆ ಕೃಷ್ಣ ಭಟ್ (82) ಅವರು ಸೋಮವಾರ ನಿಧನರಾಗಿದ್ದಾರೆ.
ಆರಂಭದಲ್ಲಿ ಮುಂಬಯಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸೂರ್ಯನಾರಾಯಣ ಅವರು ಊರಿಗೆ ಮರಳಿದ ಬಳಿಕ ಕರಾವಳಿಯ ಹೆಸರಾಂತ ಅಡುಗೆ ತಯಾರಕರಾಗಿದ್ದ ಅವರ ಸಹೋದರ ಶ್ರೀಧರ ಮಯ್ಯ ಅವರ ಮಾರ್ಗದರ್ಶನದಲ್ಲಿ ಅಡುಗೆ ಕೃಷ್ಣ ಭಟ್ ಎಂಬ ಹೆಸರಿನಲ್ಲಿ ಸಾಂಬಾರು ಮಸಾಲೆ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಕರಾವಳಿಯ ನಾನಾ ರೀತಿಯ ಖಾದ್ಯಗಳ ಮಸಾಲೆ ತಯಾರಿಕೆಯಲ್ಲಿ ಹೊಸ ಕ್ರಾಂತಿ ಮಾಡಿದ ಅವರು, ಕರಾವಳಿಯ ಬ್ರಾಹ್ಮಣರ ಶೈಲಿಯ ಖಾದ್ಯವನ್ನು ವಿಶ್ವಕ್ಕೆ ಪರಿಚಯಿಸಿದರು. ಮಾರುಕಟ್ಟೆಯಲ್ಲಿ ಬೇಡಿಕೆಯ ಹಿನ್ನೆಲೆಯಲ್ಲಿ ಬೈಕಂಪಾಡಿಯಲ್ಲಿ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಬೃಹತ್ ಘಟಕ ಸ್ಥಾಪಿಸಿ, ಗೃಹಿಣಿ ಎಂಬ ಹೆಸರಿನಲ್ಲಿ ಎಲ್ಲ ರೀತಿಯ ಮಸಾಲೆ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಸಸ್ಯಾಹಾರಿ ಖಾದ್ಯಗಳ ಮಸಾಲೆ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ್ದರು. ಗೃಹಿಣಿ ಉತ್ಪನ್ನಗಳ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶಿವಾನಂದ ರಾವ್ ಹಾಗೂ ತಯಾರಿಕಾ ವಿಭಾಗದ ಮುಖ್ಯಸ್ಥ ಶುಭಾನಂದ ಸೇರಿದಂತೆ ಪುತ್ರಿ ಇದ್ದಾರೆ.