ದತ್ತು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಿ

9 ALVANDI 01
ಅಳವಂಡಿ ಸಮೀಪದ ಮೊರನಾಳ ಗ್ರಾಮವನ್ನು ದತ್ತು ಗ್ರಾಮ ಅಭಿವೃದ್ಧಿಗಾಗಿ ಆಯ್ಕೆ ಮಾಡಿರುವ ಕುರಿತು ಗ್ರಾಮಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಯಿತು. ಪ್ರಮುಖರಾದ ಪ್ರಕಾಶ ವಡ್ಡರ, ಯಂಕಪ್ಪ, ದುರಗಪ್ಪ ಭಜಂತ್ರಿ ಅಂದಪ್ಪ, ಭರಮಪ್ಪ, ದಾನಪ್ಪ, ಯಮನೂರಪ್ಪ, ದೇವರಾಜ ಇತರರು ಇದ್ದರು.
Published on

ಅಳವಂಡಿ: ಪ್ರತಿ ರಂಗದಲ್ಲಿ ಗ್ರಾಮವನ್ನು ಅಭಿವೃದ್ಧಿಪಡಿಸುವುದೇ ದತ್ತು ಗ್ರಾಮದ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ ತಿಳಿಸಿದರು.

ಸಮೀಪದ ಮೊರನಾಳ ಗ್ರಾಮದ ಮಲಿಯಾಂಬಿಕಾ ದೇವಸ್ಥಾನ ಆವರಣದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಮೊರನಾಳ ಗ್ರಾಮವನ್ನು ದತ್ತು ಗ್ರಾಮ ಅಭಿವೃದ್ಧಿಗಾಗಿ ಆಯ್ಕೆ ಮಾಡಿರುವ ಕುರಿತು ಗ್ರಾಮಸ್ಥರೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿದರು.

ಸಂಸದರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ದಿಶಾ ಸಭೆಯಲ್ಲಿ ಲೇಬಗೇರಿ ಗ್ರಾಮ ಪಂಚಾಯಿತಿ ಕಾಮನೂರು ಗ್ರಾಮ ಹಾಗೂ ಬೆಟಗೇರಿ ಗ್ರಾಮ ಪಂಚಾಯತಿ ಮೋರನಾಳ ಗ್ರಾಮಗಳನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ದತ್ತು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು ಗ್ರಾಮ ಪಂಚಾಯತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯಿಂದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅವಕಾಶ ಇದೆ. ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಅವಶ್ಯವಿರುವ ಕಾಮಗಾರಿ ಕುರಿತು ತಿಳಿಸಬೇಕು.

ಎಲ್ಲಾ ತಾಂತ್ರಿಕ ಸಹಾಯಕರು ಪ್ರತಿ ಕಾಲೋನಿಗೆ ಭೇಟಿ ನೀಡಿ ಚರಂಡಿ, ರಸ್ತೆ, ಶಾಲಾಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು. ಗ್ರಾಮಕ್ಕೆ ಅವಶ್ಯವಿರುವ ಕಾಮಗಾರಿಗಳನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆ ಹಾಗೂ ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆ ಮೂಲಕ ಕಾಮಗಾರಿಗಳನ್ನು ಅನುಷ್ಠಾನಿಸಲಾಗುವುದು. ಗ್ರಾಮದಲ್ಲಿರುವ ಸಣ್ಣ, ಅತೀ ಸಣ್ಣ ರೈತರಿಗೆ ನರೇಗಾದಡಿ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ಪ್ರತಿಯೊಬ್ಬರೂ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ತಮ್ಮ ಆದ್ಯತಾ ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸಲು ತಿಳಿಸಿದರು.

ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಗ್ರಾಪಂ ಅಧ್ಯಕ್ಷ ದುರಗಪ್ಪ ಭಜಂತ್ರಿ, ಗ್ರಾಪಂ ಸದಸ್ಯರಾದ ಅಂದಪ್ಪ ಚೀಲಗೋದ್ರ, ಭರಮಪ್ಪ ಹುಳ್ಳಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಾನಪ್ಪ ಸಂಗಟಿ, ತಾಂತ್ರಿಕ ಸಂಯೋಜಕ ಯಮನೂರಪ್ಪ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಮುಖಂಡರಾದ ಚಂದ್ರಪ್ಪ ಹುಳ್ಳಿ, ಯಲ್ಲಪ್ಪ ಮಾಗಳಾದ, ದೇವಪ್ಪ ಮಾಗಳಾದ, ಸಣ್ಣ ಈರಪ್ಪ ಅಣಬಿ, ಮಂಜಪ್ಪ ಸಂಗಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net