

ಚಿಕ್ಕಬಳ್ಳಾಪುರ: ಕಾನೂನಿನ ಮೂಲಕವೇ ಮಕ್ಕಳನ್ನು ದತ್ತು ಪಡೆಯಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಿಲ್ಪ ಸಲಹೆ ನೀಡಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಮತ್ತು ಮಕ್ಕಳ ದತ್ತು ಪ್ರಕ್ರಿಯೆ ಕುರಿತು ಜಿಲ್ಲಾ ಮಟ್ಟದ ತರಬೇತಿ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಲ್ಲದವರು ಶಾಶ್ವತವಾಗಿ ಮಗುವಿನ ಹಕ್ಕು ಬಾಧ್ಯತೆ ಗಳೊಂದಿಗೆ ಮತ್ತು ಜವಾಬ್ದಾರಿಗಳನ್ನು ಕಾನೂನು ಬದ್ಧವಾಗಿ ಪಡೆದುಕೊಳ್ಳುವುದೇ ದತ್ತು ಸ್ವೀಕಾರ. ಈ ಪ್ರಕ್ರಿಯೆಗೆ ಪರಿತ್ಯಕ್ತ, ಅನಾಥ, ಒಪ್ಪಿಸಲ್ಪಟ್ಟ ಮಕ್ಕಳು ಒಳಪಡಲಿದ್ದು ಮಕ್ಕಳ ಮಾರಾಟ ಶಿಕ್ಷಾರ್ಹ ಅಪರಾಧ. ಇದಕ್ಕೆ ಬಾಲನ್ಯಾಯಕಾಯ್ದೆ 2015 ಸೆಕ್ಷನ್ 81ರ ಅನ್ವಯ
5 ವರ್ಷಗಳವರೆಗೂ ಸೆರೆಮನೆ ವಾಸದೊಂದಿಗೆ 1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಈ ಅಪರಾಧದಲ್ಲಿ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾದರೆ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ಶಿಕ್ಷೆ ವಿಸ್ತರಣೆಯಾಗುತ್ತದೆ ಎಂದರು.
ದತ್ತು ಪಡೆಯಲು ಬಯಸುವ ದಂಪತಿಗಳು ನೋಂದಣಿ ಮಾಡಿಕೊಳ್ಳಲು ಕೇಂದ್ರ ಸರ್ಕಾರದ https://cara.wcd.gov.in ಅಥವಾ https://carings.wcd.gov.in ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಪ್ರಾತ್ಯಕ್ಷಿಕೆ ಮೂಲಕ ದತ್ತು ಪ್ರಕ್ರಿಯೆ ಬಗ್ಗೆ ಮತ್ತು ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ. ಉಪಕಾರ್ಯದರ್ಶಿ ಅತಿಕ್ ಪಾಷಾ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ನೌತಾಜ್ ಮತ್ತಿತರರು ಇದ್ದರು.