

ಕಂಪ್ಲಿ: ಅಕ್ರಮವಾಗಿ ಮಕ್ಕಳ ದತ್ತು ಪಡೆಯುವುದು, ಮಕ್ಕಳ ಕೊಳ್ಳುವಿಕೆ, ಮಾರಾಟ, ಸಾಗಣೆ ಕಾನೂನುಬಾಹಿರವಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ಹೇಳಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ನಡೆಯಿತು. ಕಾನೂನು ಬದ್ಧವಾಗಿ ದತ್ತು ಪಡೆಯುವಲ್ಲಿ ಜಾಗೃತಿ ಅಗತ್ಯವಿದೆ. ಆಸ್ಪತ್ರೆಗಳ ಸಿಬ್ಬಂದಿಯೂ ದತ್ತು ಮಕ್ಕಳ ಕಾಯ್ದೆ ಉಲ್ಲಂಘನೆಯಾಗದಂತೆ ಎಚ್ಚರಿಕೆವಹಿಸಬೇಕು. 2012 ರಿಂದ 2023ರತನಕ ಒಟ್ಟು 51 ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಿದೆ ಎಂದರು.
ಸಿಎಚ್‌ಸಿ ಪ್ರಭಾರ ತಾಲೂಕು ಮೇಲ್ವಿಚಾರಣಾಧಿಕಾರಿ ಡಾ.ಜಿ.ಅರುಣ್ ಮಾತನಾಡಿ, ಅಕ್ರಮ ದತ್ತು ಪರಿಣಾಮದಿಂದಾಗುವ ತೊಂದರೆಗಳು, ಮೋಸದ ಮೂಲಕ ಮಗುವನ್ನು ದತ್ತು ಪಡೆಯುವುದನ್ನು ತಪ್ಪಿಸಲು ಸೂಕ್ತ ಕಾನೂನಿನ ತಿಳಿವಳಿಕೆ ನೀಡಬೇಕಿದೆ. ಆಸ್ಪತ್ರೆ ಸಿಬ್ಬಂದಿ ಅಕ್ರಮ ದತ್ತು ತಡೆಯುವಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಆಸ್ಪತ್ರೆ ಸಿಬ್ಬಂದಿಗೆ ಸೂಚನೆ ನೀಡಿದರು.
ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ, ಮಹಿಳಾ ಮೇಲ್ವಿಚಾರಕಿ ಲತೀಫಾ ಬೇಗಂ, ಆಡಳಿತಾಧಿಕಾರಿಗಳಾದ ಡಾ.ರೇವಣಸಿದ್ದಪ್ಪ ಕೋರಿ, ಡಾ. ಮಹ್ಮದ್ ಫಾರೂಖ್, ಆಸ್ಪತ್ರೆ ಸಿಬ್ಬಂದಿ ಡಾ.ಭರತ್ ಪದ್ಮಶಾಲಿ, ಡಾ.ಪ್ರವೀಣ್ ಕುಮಾರ್, ಡಾ.ಶ್ರುತಿ, ಪಿ.ಬಸವರಾಜ, ಪ್ರಶಾಂತಕುಮಾರ್, ಈರಣ್ಣ, ಮಕ್ಕಳ ಸಹಾಯವಾಣಿ ಮೇಲ್ವಿಚಾರಕ ಎಚ್.ಗಣೇಶ ಇತರರಿದ್ದರು.