ಹುಲಿ ಸೆರೆಗೆ ಬೋನು ಅಳವಡಿಕೆ

06-GPT-4A
Published on

ಗುಂಡ್ಲುಪೇಟೆ : ತಾಲೂಕಿನ ಪಡಗೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಕೆಲವು ತಿಂಗಳಿನಿಂದ ರೈತರ ಸಾಕು ಪ್ರಾಣಿಗಳನ್ನು ಕೊಲ್ಲುತ್ತಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಬೋನು ಅಳವಡಿಸಿದೆ.

ಈ ಹಿಂದೆಯೂ ಅರಣ್ಯ ಇಲಾಖೆ ಬೋನು ಅಳವಡಿಸಿದ್ದರೂ ಹುಲಿ ಬೋನಿನತ್ತ ಸುಳಿಯುತ್ತಿಲ್ಲ. ಇದರಿಂದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ನೂರಾರು ಜಾನುವಾರುಗಳು ಬಲಿಯಾಗುತ್ತಿವೆ.

ಕೂಡಲೇ ಹುಲಿ ಸೆರೆಹಿಡಿಯುವಂತೆ ಗ್ರಾಮಸ್ಥರು ಹಾಗೂ ರೈತ ಸಂಘಟನೆಯವರು ಪ್ರತಿಭಟನೆ ನಡೆಸಿದ್ದರೂ ಯಾವುದೇ ಪರಿಣಾಮವಾಗಿರಲಿಲ್ಲ. ಕಳೆದ ಮೂರು ದಿನಗಳ ಹಿಂದೆಯೂ ಗ್ರಾಮದ ನಾಗೇಶ್ ಎಂಬುವರ ಹಸುವನ್ನು ಹುಲಿ ಕೊಂದು ಹಾಕಿತ್ತು.

ಇದರಿಂದ ರೊಚ್ಚಿಗೆದ್ದ ರೈತರು ಹಸುವಿನ ಕಳೇಬರವನ್ನು ಟ್ರ್ಯಾಕ್ಟರ್ ಮೇಲೆ ಹಾಕಿಕೊಂಡು ಹುಲಿ ಸೆರೆ ಹಾಗೂ ಪರಿಹಾರ ನೀಡುವಂತೆ ಒತ್ತಾಯಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹುಲಿ ಸಂಚರಿಸುತ್ತಿದ್ದ ಪ್ರದೇಶದಲ್ಲಿ ಎಸ್‌ಟಿಪಿಎಫ್ ಸಿಬ್ಬಂದಿ ನೆರವಿನಿಂದ ಕೂಂಬಿಂಗ್ ನಡೆಸಿದ್ದರು. ಅಲ್ಲದೆ ಹುಲಿ ಸೆರೆಗೆ ದೊಡ್ಡ ಬೋನು ಅಳವಡಿಸಿದ್ದಾರೆ. ಹುಲಿಯನ್ನು ಆಕರ್ಷಿಸಲು ಬೋನಿನೊಳಗೆ ಮೇಕೆ ಮರಿಯನ್ನು ಕೂಡಿಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net