ಹುಲಿ ಸೆರೆಗೆ ಬೋನು ಅಳವಡಿಕೆ

23-GPT-3A
Published on

ಗುಂಡ್ಲುಪೇಟೆ: ತಾಲೂಕಿನ ಮಲ್ಲಮ್ಮನಹುಂಡಿ ಗ್ರಾಮದಲ್ಲಿ ಶುಕ್ರವಾರ ಮೂರು ಹಸುಗಳನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಬೋನು ಅಳವಡಿಸಲಾಗಿದ್ದು, ವ್ಯಾಘ್ರನ ಜಾಡು ಪತ್ತೆಗಾಗಿ ಅರಣ್ಯ ಇಲಾಖೆ ಕೂಂಬಿಂಗ್ ಆರಂಭಿಸಿದೆ.

ಕೆಲವು ದಿನಗಳಿಂದ ಕಗ್ಗಳ, ಕಗ್ಗಳದಹುಂಡಿ, ಮಲ್ಲಮ್ಮನಹುಂಡಿ ಗ್ರಾಮದಲ್ಲಿ ಜಾನುವಾರುಗಳನ್ನು ಕೊಲ್ಲುತ್ತಿರುವ ಹುಲಿ ಸೆರೆಗೆ ಜಮೀನಿನಲ್ಲಿ ಬೋನು ಅಳವಡಿಸಲಾಗಿದೆ. ಹುಲಿಯ ಜಾಡು ಪತ್ತೆಗೆ ಎಸ್‌ಟಿಪಿಎಫ್ ಸಿಬ್ಬಂದಿ ಮೂರು ತಂಡಗಳಲ್ಲಿ ಕಗ್ಗಳ ಸಮೀಪದ ದೊಡ್ಡಮ್ಮತಾಯಿ ತೋಪು, ಸಮೀಪದ ಕೆರೆ ಹಾಗೂ ಗುಡ್ಡದಲ್ಲಿ ಕೂಂಬಿಂಗ್ ನಡೆಸಿತು.

ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಜಾಡು ಪತ್ತೆಗೆ ಶ್ರಮಿಸಿದರೂ ಹುಲಿ ಸುಳಿವು ಪತ್ತೆಯಾಗಿಲ್ಲ. ಸಮೀಪದಲ್ಲಿ ಬೀಡುಬಿಟ್ಟಿರುವ ನೂರಾರು ಎಕರೆ ಜಮೀನುಗಳಲ್ಲಿ ಹುಲುಸಾಗಿ ಪೊದೆಗಳು ಬೆಳೆದಿರುವುದರಿಂದ ಹಗಲಿನಲ್ಲಿ ಹುಲಿ ಮತ್ತು ಚಿರತೆಗಳು ಇಲ್ಲಿ ಆಶ್ರಯ ಪಡೆದುಕೊಳ್ಳುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವನ್ಯಜೀವಿ ಪತ್ತೆಗೆ ಅರಣ್ಯ ಇಲಾಖೆ ಕ್ಯಾಮರಾಗಳನ್ನು ಅಳವಡಿಸಿದ್ದು, ಇದರಲ್ಲಿ ಸೆರೆಯಾಗುವ ಚಿತ್ರಗಳಿಂದ ಗಣತಿ ಸಂದರ್ಭದಲ್ಲಿ ಸಿಕ್ಕಿದ ಚಿತ್ರಗಳೊಂದಿಗೆ ಹೋಲಿಸಿ ಅದು ಎಲ್ಲಿಂದ ಬರುತ್ತಿದೆ, ವಲಸೆ ಬಂದಿದೆಯೇ, ಕಾದಾಟದಲ್ಲಿ ಗಾಯಗಳಾಗಿದೆಯೇ, ಅನಾರೋಗ್ಯಕ್ಕೊಳಗಾಗಿದೆಯೇ.. ಹೀಗೆ ಹಲವು ವಿಚಗರಳನ್ನು ಪತ್ತೆ ಹಚ್ಚಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುತ್ತಿತ್ತು. ಈವರೆಗೆ ಬಫರ್ ವಲಯದ ಗುಂಡ್ಲುಪೇಟೆ ಟೌನ್, ಕುಂದಕೆರೆ ಹಾಗೂ ಮದ್ದೂರು ಸೇರಿದಂತೆ ಮೂರು ಕಡೆಗಳಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ತಲಾ ಎರಡು ಕ್ಯಾಮರಾಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಜೆ.ರವೀಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net