

ಆನೇಕಲ್: ಸ್ಯಾಂಡಲ್‌ವುಡ್ ನಟ ವಸಿಷ್ಠ ಸಿಂಹ ಅವರು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸಿಂಹದ ಮರಿಯನ್ನು ದತ್ತು ಪಡೆದು 2021ನೇ ಸಾಲನ್ನು ವಿಶಿಷ್ಟವಾಗಿ ಆರಂಭಿಸಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು, ಸಿಂಹದ ಮರಿಯ ದತ್ತು ಪ್ರಕ್ರಿಯೆ ಪೂರ್ಣಗೊಳಿಸಿ, ವನ್ಯಜೀವಿಗಳ ಮೇಲಿನ ಪ್ರೇಮ ಮೆರೆದರು.
ದತ್ತು ಪಡೆದಿರುವ ಸಿಂಹದ ಮರಿಗೆ ಅವರ ತಂದೆಯ ಹೆಸರಾದ ವಿಜಯ ನರಸಿಂಹ ಎಂದು ನಾಮಕರಣ ಮಾಡಿದರು. ದತ್ತು ಪಡೆದಿರುವ ಮರಿ, ಕನ್ನಡ ಮೇರುನಟ ಡಾ.ರಾಜ್‌ಕುಮಾರ್ ಜನ್ಮದಿನದಂದು ಜನಿಸಿರುವುದು ವಿಶೇಷ.
ಮುಂದಿನ ದಿನಗಳಲ್ಲಿ ಪ್ರತಿಯೊಂದು ಸಿನಿಮಾ ಮಾಡಿದಾಗಲೂ ಒಂದೊಂದು ಪ್ರಾಣಿಯನ್ನು ದತ್ತು ಪಡೆಯಲಿದ್ದೇನೆ. ಈಗ ಸಿಂಹದ ಮರಿಯನ್ನು ದತ್ತು ಪಡೆದಿರುವುದು ಸಂತಸ ತಂದಿದೆ ಎಂದು ವಸಿಷ್ಠ ಸಿಂಹ ತಿಳಿಸಿದರು.
ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ಮಾತನಾಡಿ, ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ಜನಸಾಮಾನ್ಯರು ಮುಂದೆ ಬರಬೇಕು. ಕರೊನಾದಿಂದ ಈಗಾಗಲೇ ಬಹಳಷ್ಟು ನಷ್ಟವಾಗಿದೆ. ದತ್ತು ಪಡೆಯುವವರಿಂದ ಮೃಗಾಲಯಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದರು.