ಬನ್ನೇರುಟ್ಟದ 2 ಗಂಡು ಹುಲಿಮರಿಗಳ ದತ್ತು

25_10_2025_BGR_RURAL_PAGE_3
Published on

ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 2 ಗಂಡು ಹುಲಿ ಮರಿಗಳನ್ನು 5 ವರ್ಷಗಳ ಅವಧಿಗೆ ಪ್ರೆಸ್ಟೀಜ್​ ಗ್ರೂಪ್​ ದತ್ತು ತೆಗೆದುಕೊಂಡಿದೆ. ಮರಿಗಳಿಗೆ ಸಿಂಬಾ ಮತ್ತು ಶೇರು ಎಂದು ಹೆಸರಿಡಲಾಗಿದೆ ಮತ್ತು ಪ್ರೆಸ್ಟೀಜ್​ ಮುಂದಿನ ಐದು ವರ್ಷಗಳ ಕಾಲ ಅವುಗಳ ಆರೈಕೆ ಮಾಡಲಿದೆ. ಸಂಸ್ಥೆಯು ವರ್ಷಕ್ಕೆ ಒಂದು ಹುಲಿಗೆ 2 ಲಕ್ಷ ರೂ. ಮೀಸಲಿಟಿದ್ದು, 5 ವರ್ಷಕ್ಕೆ ಎರಡೂ ಹುಲಿಗಳಿಗೆ ಸೇರಿ ಸುಮಾರು 20 ಲಕ್ಷ ರೂ. ವ್ಯಯ ಮಾಡಲಿದೆ. ವನ್ಯಜಿವಿ ಸಂರಕ್ಷಣೆ, ಪರಿಸರ ಸಮತೋಲನ ಮತ್ತು ಜೀವವೈವಿಧ್ಯ ರಕ್ಷಣೆ ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವ ಮಹತ್ಕಾರ್ಯಕ್ಕೆ ದತ್ತು ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಉದ್ಯಾನವನದ ಆಡಳಿತ ಮಂಡಳಿ ತಿಳಿಸಿದೆ.

ಪಶು ವೈದ್ಯಕಿಯ ಆರೈಕೆಗೆ ವಿನಿಯೋಗ : ಪ್ರಾಣಿ ದತ್ತು ಕಾರ್ಯಕ್ರಮದ ಮೂಲಕ ಸಂಗ್ರಹಿಸಿದ ಹಣವನ್ನು ನಮ್ಮ ಪ್ರಾಣಿಗಳಿಗೆ ಆಹಾರ, ಪಶು ವೈದ್ಯಕಿಯ ಆರೈಕೆಗೆ ವಿನಿಯೋಗಿಸಲಾಗುವುದು. ಪ್ರತಿಯೊಬ್ಬ ವ್ಯಕ್ತಿಯನ್ನು ದತ್ತು ಕುಟುಂಬದ ಭಾಗವಾಗಲು ಮತ್ತು ವನ್ಯಜಿವಿ ರಕ್ಷಣೆಗೆ ಕೊಡುಗೆ ನೀಡಲು ಆಹ್ವಾನಿಸುತ್ತೇವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್​ ಐಎಫ್​ಎಸ್​ ತಿಳಿಸಿದ್ದಾರೆ.

ಸಿಂಬಾ ಮತ್ತು ಶೇರು ಹೆಸರಿನ ಹುಲಿ ಮರಿಗಳೊಂದಿಗೆ ನಾವು ಸಹಬಾಳ್ವೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ನೈಸರ್ಗಿಕ ಪರಂಪರೆ ರಕ್ಷಿಸುವ ಸಾಮೂಹಿಕ ಪ್ರಯತ್ನ ಬಲಪಡಿಸುವ ಗುರಿ ಹೊಂದಿದ್ದೇವೆ. ಈ ದತ್ತು ಸ್ವೀಕಾರವು ಸಾಮೂಹಿಕ ಬದ್ಧತೆಯನ್ನು ಹೇಗೆ ಬಲಪಡಿಸಬಹುದು ಎಂಬುದರ ಸಂಕೇತವಾಗಿದೆ. > ನಿರ್ಭಯ್​ ಲುಮ್ಡೆ ಹಿರಿಯ ಉಪಾಧ್ಯಕ್ಷ, ಪ್ರೆಸ್ಟೀಜ್​ ಗ್ರೂಪ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net