

ಮಂಡ್ಯ: ಇಂದಿನ ಯುವ ಸಮುದಾಯ ಎಲ್ಲವನ್ನೂ ಮರೆತು ಅಜ್ಞಾನಿಗಳಾಗುತ್ತಿದ್ದಾರೆ. ತಂದೆ, ತಾಯಿ, ಗುರು-ಹಿರಿಯರು ಅಷ್ಟೇ ಏಕೆ ದೇಶವನ್ನೂ ಮರೆಯುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಆತಂಕ ವ್ಯಕ್ತಪಡಿಸಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ ಹಾಗೂ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಗೈಡ್ಸ್ ವಿದ್ಯಾರ್ಥಿನಿಯರ ದತ್ತು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಯುವ ಸಮುದಾಯ ಮನಸ್ಸು ಮಾಡಿದಲ್ಲಿ ಒಳ್ಳೆಯ ಸಮಾಜ ನಿರ್ಮಾಣ ಮಾಡಬಹುದು. ಆದರೆ ಯುವಜನತೆ ಎಲ್ಲರನ್ನೂ ಮರೆತು ಸ್ವಾರ್ಥ ಬದುಕನ್ನು ಸಾಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳು ಅಹಂಕಾರಿಗಳಾಗಬಾರದು. ಪಾಲಕರು, ಗುರು ಹಿರಿಯರ ಪ್ರಯತ್ನದಿಂದಲೋ ಎಲ್ಲವನ್ನೂ ಪಡೆದು ಉನ್ನತ ಸ್ಥಾನಕ್ಕೆ ಬಂದು ಬದುಕು ರೂಪಿಸಿಕೊಂಡ ನಂತರ ಸಮಾಜವನ್ನು ಮರೆಯಬಾರದು. ಮನುಷ್ಯತ್ವವನ್ನು ಬೆಳೆಸಿಕೊಂಡು ಅಭಿವೃದ್ಧಿ ರಾಷ್ಟ್ರದತ್ತ ಗಮನ ಹರಿಸಬೇಕು. ಗೈಡ್ಸ್ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ಶಿಕ್ಷಣಕ್ಕೆ ಸಹಾಯಹಸ್ತ ನೀಡುವಂತಹ ಮನಸ್ಸುಗಳು ಇನ್ನಷ್ಟು ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯವೂ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಒಳ್ಳೆಯ ಬೀಜವನ್ನು ಬಿತ್ತಿ, ಅದು ಮೊಳಕೆಯೊಡೆದು ಉತ್ತಮ ಸಸಿಯಾದಾಗ ಕಳೆ ಬಾದಿಸುತ್ತದೆ. ಅದನ್ನು ತೆಗೆದು ಗೊಬ್ಬರ ಹಾಕಿ ಆರೈಕೆ ಮಾಡಿ, ಒಳ್ಳೆಯ ಬೆಳೆ ಪಡೆಯಲು ಏನೆಲ್ಲ ಮಾಡಬೇಕು. ಅದೇ ರೀತಿ ಮಕ್ಕಳನ್ನು ಸಾಕಿ, ಸಲುಹಿ, ಶಿಕ್ಷಣ ಕೊಡಿಸಿ, ಅವರಿಗೊಂದು ಬದುಕು ನೀಡಿದ ಪಾಲಕರನ್ನು ಮರೆಯಬಾರದು. ಜತೆಗೆ ಸಮಾಜಕ್ಕೆ ಕನಿಷ್ಟವಾದರೂ ಸಹಾಯ ಮಾಡುವ ವ್ಯಕ್ತಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದಾಗ ಅವರ ವ್ಯಕ್ತಿತ್ವವನ್ನು ಪೋಷಣೆ ಮಾಡಲು ಸಾಧ್ಯ. ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಹ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆಸಕ್ತಿ ಇಲ್ಲದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಪ್ರಯತ್ನ ಮಾಡಿ ಒಳ್ಳೆಯ ಸಂದೇಶ ನೀಡುತ್ತಿದೆ. ಮಕ್ಕಳು ಚೆನ್ನಾಗಿ ಓದಿ ಪಾಲಕರಿಗೆ ಕೀರ್ತಿ ತರುತ್ತೇವೆ. ಸಮಾಜವನ್ನು ರಕ್ಷಣೆ ಮಾಡುತ್ತೇವೆ ಎಂಬ ಸಂಕಲ್ಪ ಮಾಡಿದರೆ ಶ್ರೇಷ್ಟ ಸಮಾಜ ನಿರ್ಮಾಣ ಮಾಡಬಹುದು ಎಂದು ಅಭಿಪ್ರಾಯಿಸಿದರು.
ಉದ್ಯಮಿ ಜನಾರ್ಧನ್ ಮಾತನಾಡಿ, ಮಕ್ಕಳಿಗೆ ಅಕ್ಷರ ಜ್ಞಾನ ಕೊಡುವುದರ ಜತೆಗೆ ಸಂಸ್ಕಾರ ಸಂಸ್ಕೃತಿಯಿಂದ ಏಳಿಗೆಯಾಗಲು ಸಾಧ್ಯ. ನನ್ನ ಜೀವನದ ಪ್ರಥಮ ಶಿಕ್ಷಕಿ ನನ್ನ ತಾಯಿ. ಅವರ ಜ್ಞಾಪಕಾರ್ಥವಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇನೆ. ಇದರಿಂದ ಒಂದಷ್ಟು ಜನರಿಗೆ ಅನುಕೂಲವಾದರೆ ಅದಷ್ಟೇ ಸಾಕು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಜಿಲ್ಲಾ ಸ್ಕೌಟ್ಸ್ ಅ್ಯಂಡ್ ಗೈಡ್ಸ್‌ನ ಮುಖ್ಯ ಆಯುಕ್ತ ಜಿ.ಪಿ.ಭಕ್ತವತ್ಸಲ, ಗೈಡ್ಸ್ ವಿಭಾಗದ ಆಯುಕ್ತೆ ಕೆ.ಸಿ.ನಾಗಮ್ಮ, ಸ್ಕೌಟ್ಸ್ ಆಯುಕ್ತ ಡಾ.ಎಚ್.ಅನಿಲ್‌ಕುಮಾರ್, ಎಸ್.ಸೌಮ್ಯಲತಾ ಇತರರಿದ್ದರು.
ಇದೇ ವೇಳೆ ಮೂಡಲಪಾಯ ಯಕ್ಷಗಾನ ಪ್ರಸಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನವ್ಯಶ್ರೀ, ಎಸ್.ಎಂ.ಮೇಘನಾ ಅವರನ್ನು ಉದ್ಯಮಿ ಜನಾರ್ಧನ್ ದತ್ತು ಸ್ವೀಕರಿಸಿದರು.