

ತಿ.ನರಸೀಪುರ: ಶಿಕ್ಷಣದಿಂದ ದೊರಕುವ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕಿ ಡಾ.ಬಿ.ವಿ.ಸುಧಾಮಣಿ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಪಟ್ಟಣದ ಕಬಿನಿ ಕಾಲನಿಯಲ್ಲಿರುವ ಭೈರಾಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿಕ ಕ್ರೀಡೆ, ಎನ್ನೆಸ್ಸೆಸ್ಸ್, ಯುವರೆಡ್ ಕ್ರಾಸ್ ಹಾಗೂ ರೇಂಜರ್ಸ್ ಘಟಕಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ನಿಮ್ಮ ಬದುಕಿನಲ್ಲಿ ಸಮಗ್ರ ಹಾಗೂ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದ್ದು, ಶಿಕ್ಷಣ ಪಡೆಯುವ ಜತೆಗೆ ನಮ್ಮ ಐತಿಹಾಸಿಕ ಪರಂಪರೆ ತಿಳಿಯುವುದೂ ಕೂಡ ಅಗತ್ಯ ಎಂದರು.
ನರಸೀಪುರ ತಾಲೂಕು ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪಾರಂಪರಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದ್ದು, ಈ ಬಗ್ಗೆ ಪುರಾತತ್ವ ಇಲಾಖೆಯೂ ಕೂಡ ಐತಿಹಾಸಿಕ ಮಾಹಿತಿ ನೀಡಿದೆ. ಇಲ್ಲಿಗೆ ವಿಜಯನಗರದ ಅರಸರ ಕಾಲದ ಇತಿಹಾಸವಿದ್ದು, ತಲಕಾಡು ಗಂಗರ ಆಡಳಿತದ ಮಾಹಿತಿ ಮತ್ತು ಕಾವೇರಿ ಕಪಿಲಾ ಹಾಗೂ ಸ್ಫಟಿಕ ಸರೋವರಗಳ ಸಂಗಮವಿಲ್ಲಿದೆ. ಅನೇಕ ಐತಿಹಾಸಿಕ ಹಿನ್ನೆಲೆಗಳು ಇಲ್ಲಿ ಕಂಡು ಬಂದಿವೆ ಎಂದು ಬಣ್ಣಿಸಿದರು.
ಇತ್ತೀಚಿನ ಮಕ್ಕಳಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಕಾಣುತ್ತಿಲ್ಲ. ಸಣ್ಣ ಕಾರಣಗಳಿಗಾಗಿ ಆತ್ಮಹತ್ಯೆ ಹಾದಿ ಹಿಡಿಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮೊಬೈಲ್ ಬಳಕೆಯಿಂದ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿದೆ. ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡಲ್ಲಿ ಮಾತ್ರ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಕಾಲೇಜು ಹಂತದಲ್ಲಿ ಪ್ರತಿಭೆ ಅನಾವರಣಗೊಳಿಸಲು ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯಂತಹ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರಬೇಕೆಂದು ಕರೆ ನೀಡಿದರು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಮೈಸೂರಿನ ಸ್ಥಾನಿಕ ಆಯುಕ್ತ ಎಂ.ವಿ.ಅಮರ್‌ನಾಥ್ ಮಾತನಾಡಿ, ವಿದ್ಯಾರ್ಥಿಗಳ ಶಿಸ್ತುಬದ್ಧ ಜೀವನ ಕ್ರಮಕ್ಕೆ ಅಗತ್ಯವಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆಯ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು.
ಕಾಂಗ್ರೆಸ್‌ನ ಮೈಸೂರು ಜಿಲ್ಲಾ ವೈದ್ಯಕೀಯ ವಿಭಾಗದ ಅಧ್ಯಕ್ಷ ಡಾ.ಬಿ.ಪ್ರದೀಪ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ನಡೆಸುವ ಸಾರ್ವಜನಿಕ ಸೇವಾ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಎನ್ನೆಸ್ಸೆಸ್ಸ್ ಯುವಜನರ ಸ್ವಯಂ ಪ್ರೇರಿತ ಸಂಘವಾಗಿದ್ದು, ವಿದ್ಯಾರ್ಥಿಗಳಲ್ಲಿ ಸಮಾಜ ಕಲ್ಯಾಣದ ಕಲ್ಪನೆಯನ್ನು ಹುಟ್ಟು ಹಾಕಲಿದೆ. ಪಕ್ಷಪಾತವಿಲ್ಲದೆ ಸಮಾಜಕ್ಕೆ ಸೇವೆ ಮಾಡುವುದು, ತುರ್ತು ಪರಿಸ್ಥಿತಿ ಹಾಗೂ ನೈಸರ್ಗಿಕ ವಿಕೋಪಗಳನ್ನು ಎದುರಿಸುವುದು, ಗುಂಪು ಜೀವನ ಮತ್ತು ಜವಾಬ್ದಾರಿಗಳ ಹಂಚಿಕೆಗೆ ಅಗತ್ಯವಿರುವ ಸಾಮರ್ಥ್ಯವನ್ನು ಅಭಿವೃದ್ಧಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಬಿ.ಪಿ. ಇಂದಿರಾ ಮಾತನಾಡಿದರು. ನಿರ್ಗಮಿತ ಪ್ರಾಂಶುಪಾಲ ಡಾ.ವಿ.ವಿ. ಜಗದೀಶ್ ಹಾಗೂ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ಐಕ್ಯೂಎಸ್‌ಸಿ ಸಂಚಾಲಕಿ ಡಾ.ಎಂ.ನೇತ್ರಾವತಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಗುರುಪಾದಸ್ವಾಮಿ, ಕ್ರೀಡೆ, ಎನ್ನೆಸ್ಸೆಸ್ಸ್, ರೇಂಜರ್ಸ್ ಘಟಕದ ಸಂಚಾಲಕಿ ಪಿ.ಕೆ.ಶಶಿರೇಖಾ, ಕೆ.ಪಿ.ಮಂಜು, ಬಿ.ಎಂ. ರಾಮಮೂರ್ತಿ, ವೆಂಕಟೇಶಮೂರ್ತಿ, ನಂಜುಂಡಸ್ವಾಮಿ, ವಿದ್ಯಾರ್ಥಿ ಘಟಕದ ಪ್ರಮುಖರು, ಅಭಿವೃದ್ಧಿ ಸಮಿತಿಯ ಸದಸ್ಯರು ಇತರರಿದ್ದರು.