

ಬೀಳಗಿ: ಜಗತ್ತಿನಲ್ಲೇ ಅತ್ಯಂತ ಕಠಿಣ ವ್ರತ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ವ್ರತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ತಾಲೂಕಿನ ಕೊರ್ತಿ ಗ್ರಾಮ ಬಳಿಯ ಶಬರಿ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ದಶಮಾನೋತ್ಸವ, ಮಹಾಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಲಾಧಾರಿಗಳು 48 ದಿನಗಳವರೆಗೆ ಕಠಿಣ ವ್ರತ ಪಾಲಿಸಿ ಮುಂದೆಯೂ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಒಬ್ಬ ಉತ್ತಮ ಮನುಷ್ಯನಾಗಬೇಕು ಎಂದರು.
ಹುಬ್ಬಳ್ಳಿಯ ಶಬರಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಡಾ. ಮೋಹನ ಗುರುಸ್ವಾಮಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಶಬರಿಮಲೆಯಲ್ಲಿ 12 ವರ್ಷದೊಳಗಿನ ಹೆಣ್ಣುಮಕ್ಕಳು ಹಾಗೂ 50 ವರ್ಷ ಮೇಲ್ಪಟ್ಟ ಮಾತೆಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಆದರೆ, ಪೂಜ್ಯ ರವೀಂದ್ರ ಕಣವಿ ಸ್ವಾಮಿಗಳು ಬೀಳಗಿ ಸುಕ್ಷೇತ್ರದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಿಸಿ ದೊಡ್ಡ ಸಾಧನೆ ಮಾಡಿದ್ದಾರೆ. ಅಲ್ಲದೆ, ಎಲ್ಲ ಮಹಿಳೆಯರಿಗೂ ದೇವರ ದರ್ಶನಕ್ಕಾಗಿ ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ಕಲ್ಮಠದ ಗುರುಪಾದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪಟ್ಟಣ ಸಹಕಾರಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತುಕೋಟಿ, ನ್ಯಾಯವಾದಿ ಜಗತ್‌ನಾಯಕ್ ಕಣವಿ, ಮಂದಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾಶಿನಾಥ ಸೋಮನಕಟ್ಟಿ, ರಮೇಶ ಹುಗ್ಗಿ, ಆಶಾಬಿ ಬೀಳಗಿ, ಎಂ.ಎಲ್. ಪಾಟೀಲ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ನೂತನ ಗುರುಸ್ವಾಮಿ ಚೇತನ ಗುರುಸ್ವಾಮಿ, ಕೊರ್ತಿಯ ಶಿವು ಗುರುಸ್ವಾಮಿ, ಕೊಲ್ಹಾರದ ಚಿದಾನಂದ ಗುರುಸ್ವಾಮಿ ಇದ್ದರು.