

ಕಮತಗಿ: ಸಮಾಜದಲ್ಲಿ ಶಾಂತಿ ನೆಲೆಸಲು ಬಸವಾದಿ ಶರಣ ತತ್ವಾದರ್ಶ ಪಾಲಿಸಬೇಕು ಎಂದು ಗದಗ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ 13ನೇ ಪೀಠಾಧ್ಯಕ್ಷ ಹುಚ್ಚೇಶ್ವರ ಸ್ವಾಮೀಜಿ ಪಟ್ಟಾಧಿಕಾರದ ರಜತ ಮಹೋತ್ಸವ ಹಾಗೂ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವಜ್ರ ಮಹೋತ್ಸವದ ಹಿನ್ನೆಲೆಯಲ್ಲಿ 21 ದಿನಗಳ ವರೆಗೆ ಹಮ್ಮಿಕೊಂಡಿರುವ ಬಸವ ಪುರಾಣ-ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಡಿನ ಲಿಂಗಾಯತ ಮಠಗಳು ಬಸವ ಪರಂಪರೆಯಲ್ಲಿ ಬೆಳೆದು ಬಂದ ಮಠಗಳಾಗಿವೆ. ಜ್ಞಾನ ದಾಸೋಹ, ಅನ್ನದಾಸೋಹದ ಹೆಸರಾಗಿವೆ. ಲಿಂಗಾಯತ ಮಠಗಳಿಂದ ಶಿಕ್ಷಣ ಕ್ರಾಂತಿಯಾಗಿದೆ. ಕಮತಗಿ ಹುಚ್ಚೇಶ್ಚರ ಸ್ವಾಮೀಜಿ ಅವರು ಸಮಾಜ, ಶಿಕ್ಷಣ, ಧರ್ಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅವಿಸ್ಮರಣೀಯ ಸೇವೆ ಮಾಡುತ್ತಿದ್ದಾರೆ ಎಂದರು.
ಮುಂಡರಗಿ ಅನ್ನದಾನೇಶ್ವರ ಸಂಸ್ಥಾನಮಠದ ಡಾ. ಅನ್ನದಾನೇಶ್ವರ ಶಿವಯೋಗಿಗಳು ಮಾತನಾಡಿ, ಪ್ರತಿನಿತ್ಯ ಪುರಾಣ ಆಲಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಬಸವ ಪುರಾಣ ಕೇಳಿದರೆ ಬದುಕು ರೂಪಿಸಿಕೊಳ್ಳಬಹುದು. ಬಸವಣ್ಣನವರು ಹೇಳಿದಂತೆ ಪ್ರತಿಯೊಬ್ಬರೂ ಕಾಯಕ ಜೀವಿಗಳಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗಂಗಾವತಿ ಡಾ.ಕೊಟ್ಟೂರು ಸ್ವಾಮೀಜಿ ಮಾತನಾಡಿದರು. ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮೀಜಿ ಅವರು ಬಸವ ಪುರಾಣ ಪ್ರಾರಂಭಿಸಿದರು.
ಕಮತಗಿ-ಕೋಟೆಕಲ್ಲ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಾಸಕ ಎಚ್.ವೈ.ಮೇಟಿ ಜಾತ್ರಾ ಮಹೋತ್ಸವದ ಲೋಗೋ ಅನಾವರಣಗೊಳಿಸಿದರು.
ಮುನವಳ್ಳಿಯ ಮುರುಘೇಂದ್ರ ಸ್ವಾಮೀಜಿ, ಅಮೀನಗಡ ಶಂಕರ ರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡ ಕಾಶಿನಾಥ ಸ್ವಾಮೀಜಿ, ಕುಂಟೋಜಿಯ ಚನ್ನವೀರ ಸ್ವಾಮೀಜಿ, ಕಮತಗಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಮಾತೋಶ್ರೀ ಬಸವಣ್ಣೆಮ್ಮತಾಯಿ ಬಸರಕೋಡ, ಹುನಗುಂದ ಅಮರೇಶ್ವರ ದೇವರು, ಹೊಸಳ್ಳಿ ಬೂದೀಶ್ವರ ಸ್ವಾಮೀಜಿ, ಗುಳೇದಗುಡ್ಡ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಅರಳಿಕಟ್ಟಿ ಶಿವಮೂರ್ತಿ ಸ್ವಾಮೀಜಿ, ಗಣೇಶ ಶಾಸಿ ಹಿರೇಮಠ, ಪಪಂ ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ ಇದ್ದರು.
ಬಿಡಿಸಿಸಿ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಸ್ವಾಗತಿಸಿದರು. ಕುಂದರಗಿ ಡಾ.ಅಮರಸಿದ್ದೇಶ್ವರ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು. ದೇವರಾಜ್ ಯರಕಿಹಾಳ (ಗಾಯನ), ಸುರೇಶ ಹೂಗಾರ (ತಬಲಾ), ಯಲ್ಲಪ್ಪ ಗುಂಡಳ್ಳಿ (ವಾಯಲಿನ್) ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.