ಮಾಸ್ತಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ ನಂತರ ನಾವು ಇನ್ನೂ ಅವರ ಆಶಯ ಈಡೇರಿಸಲು ಈವರೆಗೂ ಸಾಧ್ಯವಾಗಿಲ್ಲ. ಇದು ಸಾಧ್ಯವಾಗಬೇಕಾದರೆ ನಮ್ಮ ಮನಸ್ಸುಗಳು ಒಂದಾಗಬೇಕು. ಶ್ರೀ ನಾರಾಯಣ ಗುರುಗಳ ತತ್ವ, ಆದರ್ಶ, ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಮಾಸ್ತಿ&-ಮಾಲೂರು ರಸ್ತೆಯ ಚಂದ್ರಪ್ಪ ವಾಣಿಜ್ಯ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ನಾರಾಯಣ ಗುರುಗಳ ಜಯಂತಿಯಲ್ಲಿ ಮಾತನಾಡಿದ ಅವರು, ಎಲ್ಲರೂ ಒಂದೇ ಎನ್ನುವ ಮನೋಭಾವನೆ ಎಲ್ಲರಲ್ಲೂ ಬರಬೇಕು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾದನೆ ಮಾಡಿರುವ ಶ್ರೀ ನಾರಾಯಣ ಗುರುಗಳ ಆದರ್ಶ ಅರ್ಥ ಮಾಡಿಕೊಂಡರೇ ಸಮಾಜದಲ್ಲಿ ಸಮನವಾಗಿ ಮುಖ್ಯವಾಹಿನಿಗೆ ಬರಬಹುದು. ಮುಂದಿನ ದಿನಗಳಲ್ಲಿ ಟ್ರಸ್ಟನ ಸೇವೆಗಳು ತಾಲೂಕಿನ ಜನತೆಗೆ ಸಿಗಲಿ. ವಿಶೇಷವಾಗಿ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಬಹುಭಾಷಾ ನಟ ಶರತ್ ಲೋಹಿತಾಶ್ವ ಮಾತನಾಡಿ, ಶ್ರೀ ನಾರಾಯಣ ಗುರುಗಳು ಮಹಾನ್ ವೈದ್ಯರಾಗಿದ್ದರು. ಸಮಾಜದಲ್ಲಿ ಹಲವು ಶತಮಾನಗಳಿಂದ ನಮ್ಮ ನೆಲದಲ್ಲಿ ಬೇರು ಬಿಟ್ಟಿರುವ ಕೊಳಕನ್ನು ತೊಳೆಯಲು ಸಾಕಷ್ಟು ಮಂದಿ ದಾರ್ಶನಿಕರು ತಮ್ಮ ತತ್ವ, ಸಿದ್ಧಾಂತಗಳ ಮೂಲಕ ಹೋರಾಟ ನಡೆಸಿದರೂ ಇಂದಿಗೂ ಸಮಾಜದಲ್ಲಿ ಅಸಮಾನತೆ ಕಾಣಬಹುದಾಗಿದೆ ಎಂದರು.
ಶ್ರೀ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಟಿ.ಸಿ.ರಮೇಶ್ ಮಾತನಾಡಿ, ಮಾಸ್ತಿ ಗ್ರಾಮದಲ್ಲಿ ಶ್ರೀ ನಾರಾಯಣ ಗುರುಗಳ ಆದರ್ಶ ಪುನೀತ್ ರಾಜಕುಮಾರ್ ಅವರ ಅದ್ಭುತ ಜನಸೇವೆಯನ್ನು ನಮ್ಮ ಸಂಸ್ಥೆಯ ಆದರ್ಶವೆಂದು ಭಾವಿಸಿ ಶ್ರೀ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಪ್ರಾರಂಭಿಸಲಾಗಿದೆ. ನಾರಾಯಣ ಗುರುಗಳು ಒಬ್ಬ ತಳಸಮುದಾಯದ ವ್ಯಕ್ತಿಯಾಗಿ ಹುಟ್ಟಿ, ಒಬ್ಬನೇ ದೇವರು, ಒಂದೇ ಧರ್ಮ, ಒಂದೇ ಜಾತಿ ಎಂದು ಹೇಳುವ ಮೂಲಕ ಸಮಾಜದ ಜಾತಿ ವ್ಯವಸ್ಥೆಯನ್ನು ಧಾರ್ಮಿಕ ಸಮಸ್ಯೆಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ಸಮಾಜ ಸೇವೆ ಮಾಡುವ ವ್ಯಕ್ತಿ ಹೇಗೆ ಬಾಳಬೇಕು ಎಂದು ತೋರಿಸಿಕೊಟ್ಟ ಮಹಾನ್ ಚೇತನ ಅಂತಹವರ ಆದರ್ಶದ ಹಿನ್ನಲೆಯಲ್ಲಿ ಪ್ರಾರಂಭಿಸಲಾಗಿದೆ ಎಂದರು.
ಟ್ರಸ್ಟ್ನಿಂದ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.
ಇಂಡೋ ಸ್ಪಾನಿಷ್ ಕಂಪನಿ ಪ್ರಧಾನ ವ್ಯವಸ್ಥಾಪಕ ಜಗದೀಶ್ ನಾಯಕ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎನ್.ರಮೇಶ್, ಚನ್ನರಾಯಪ್ಪ, ನಾಗರಾಜ್, ಟೆಂಪೋ ಮುನಿಯಪ್ಪ, ಬಿ.ಆರ್.ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಎಚ್.ವಿ.ಶ್ರೀನವಾಸ್, ಮಾಲೂರು ವಿಜಿ, ಟ್ರಸ್ಟ್ ಉಪಾಧ್ಯಕ್ಷ ಎಂ.ದಿನೇಶ್, ಟಿ.ಆರ್.ಚೈತನ್ಯ, ಟಿ.ಆರ್.ಚೈತ್ರ, ಎಂ.ಎಸ್.ವಿಜಯ್ ಕುಮಾರ್, ಬೇರಿಕೈ ನಾಗೇಶ್, ಮುನಿರಾಜ್, ಎಂ.ವಿ.ಚೇತನ್ ಕುಮಾರ್ ಇದ್ದರು.