ಗೌತಮ ಬುದ್ಧನ ತತ್ವ ಸಿದ್ಧಾಂತ ಅಳವಡಿಸಿಕೊಳ್ಳಿ

BBGD-12-1
ಆಲಮಟ್ಟಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತದಿಂದ ಬುದ್ಧ ಪೂರ್ಣಿಮೆ ಕಾರ್ಯಕ್ರಮ ನಡೆಯಿತು. ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ಡಿಎಸ್‌ಎಸ್ ಮುಖಂಡ ಮಹಾಂತೇಶ ಸಾಸಾಬಾಳ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಹಿರೇಮನಿ ಇತರರಿದ್ದರು.
Published on

ಬಸವನಬಾಗೇವಾಡಿ: ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ಎಲ್ಲರೂ ಗೌತಮ ಬುದ್ಧನ ತತ್ವ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕೆಂದು ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಗೌತಮ ಬುದ್ಧನ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರು ಮಾತನಾಡಿದರು.

ಗೌತಮ ಬುದ್ಧನ ತತ್ವ ಸಂದೇಶಗಳು ಪ್ರತಿ ಮನೆ ಮನಗಳಿಗೆ ತಲುಪಿಸುವಂತಹ ಕಾರ್ಯವಾಗಬೇಕು. ಮುಂದಿನ ದಿನಗಳಲ್ಲಿ ಬುದ್ಧ ಪೂರ್ಣಿಮೆಯನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಎಲ್ಲರಿಗೂ ಅವರ ಸಂದೇಶಗಳನ್ನು ಮುಟ್ಟಿಸುವಂತಾಗಬೇಕು ಎಂದರು. ಡಿಎಸ್‌ಎಸ್ ಮುಖಂಡರಾದ ಪರಶುರಾಮ ದಿಂಡವಾರ, ಅಶೋಕ ಚಲವಾದಿ ಮಾತನಾಡಿ, ರಾಜಕುಮಾರ ಸಿದ್ಧಾರ್ಥ ಹುಣ್ಣಿಮೆ ದಿನದಂದು ಜನಿಸಿ ಬೋಧಿ ವೃಕ್ಷದ ಅಡಿಯಲ್ಲಿ ಜ್ಞಾನೋದಯ ಹೊಂದಿ ಗೌತಮ ಬುದ್ಧನಾಗಿ 45 ವರ್ಷಗಳವರೆಗೆ ಜನತೆಗೆ ಸತ್ಯ ಧರ್ಮ ಬೋಧಿಸಿದರು. ಜಗತ್ತಿಗೆ ಶಾಂತಿ ಮಂತ್ರ ಬೋಧಿಸಿದ್ದಾರೆ. ಇವರ ತತ್ವಗಳು ಸಾರ್ವಕಾಲಿಕವಾಗಿವೆ ಎಂದರು.

ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಮಾತನಾಡಿ, ಬುದ್ಧನ ಉನ್ನತ ಆದರ್ಶಗಳು, ಅಹಿಂಸಾ ತತ್ವ, ಸಾಮರಸ್ಯದ ಸಂದೇಶಗಳು ಚಿರನೂತನ. ಬುದ್ಧನು ಸಮಾನತೆ, ಪ್ರೀತಿ, ದಯೆ, ಸಹಿಷ್ಣುತೆ ಪ್ರತೀಕ, ಸೌಹಾರ್ದ, ಸಹಾನುಭೂತಿಯಿಂದ ಸಮಾಜಕ್ಕಾಗಿ ಸೇವೆ ಮಾಡುವ ಸ್ಫೂರ್ತಿ ನೀಡಿದ್ದಾರೆ ಎಂದರು.

ಆಸೆಯೇ ದುಃಖದ ಮೂಲ. ಆಸೆಯನ್ನು ಜಯಿಸಲು ಬುದ್ಧನು ಅಷ್ಟಾಂಗ ಮಾರ್ಗಗಳನ್ನು ಬೋಧಿಸಿದ್ದಾನೆ. ಬುದ್ಧನ ಶ್ರೇಷ್ಠ ಚಿಂತನೆಗಳು ಮುಂದಿನ ಪೀಳಿಗೆಗೂ ಮಾರ್ಗದರ್ಶನ ನೀಡುವಂತಿವೆ ಎಂದು ಹೇಳಿದರು.

ಡಿಎಸ್‌ಎಸ್ ಮುಖಂಡರಾದ ಅರವಿಂದ ಸಾಲವಾಡಗಿ, ಗುರುರಾಜ ಗೂಡಿಮನಿ ಮಾತನಾಡಿ, ಜಗತ್ತಿಗೆ ಕರುಣೆ, ಶಾಂತಿಯನ್ನು ಗೌತಮ ಬುದ್ಧ ಬೋಧಿಸಿದ್ದಾರೆ. ಸಿದ್ಧಾರ್ಥ ಎಲ್ಲವನ್ನೂ ಪಡೆದುಕೊಂಡಿದ್ದರೂ ಅವುಗಳನ್ನು ಲೆಕ್ಕಿಸದೆ ದುಃಖ ನಿವಾರಣೆಯನ್ನು ಗುರಿಯಾಗಿಟ್ಟುಕೊಂಡು ಎಲ್ಲವನ್ನು ತೊರೆದು ನಿಜದ ಬೆಳಕಿಗಾಗಿ ಹಂಬಲಿಸಿದನು. ಸಿದ್ಧಾರ್ಥ ಮುಂದೆ ಗೌತಮ ಬುದ್ಧನಾಗಿ ಬೆಳಕು ಕಂಡುಕೊಂಡು ಬೆಳಕಾಗಿ ಇಂದಿಗೂ ಮನುಕುಲವನ್ನು ಬೆಳಗುತ್ತಿದ್ದಾನೆ ಎಂದರು.

ಡಿಎಸ್‌ಎಸ್ ಮುಖಂಡ ಮಹಾಂತೇಶ ಸಾಸಾಬಾಳ ಗೌತಮಬುದ್ಧನ ಮಂತ್ರ ಪಠಿಸಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಹಿರೇಮನಿ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಎಸಿಡಿಪಿಒ ಬಸವರಾಜ ನಿಲುಗಲ್, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಮಂಜು ಹಳ್ಳೂರ, ರಾಮಚಂದ್ರ ಘಾಟಗೆ, ಕಸಾಪ ತಾಲೂಕು ಅಧ್ಯಕ್ಷ ಶಿವಾನಂದ ಡೋಣೂರ, ನಿವೃತ್ತ ಶಿಕ್ಷಕ ಎಸ್.ಎ. ದೇಗಿನಾಳ, ಡಿಎಸ್‌ಎಸ್ ಮುಖಂಡರಾದ ಯಮನಪ್ಪ ಚಲವಾದಿ, ಯಮನೂರಿ ಅಂಬಳನೂರ, ರಾಜು ದಿಂಡವಾರ, ಶೇಖರ ಕಾಣೆ, ವೈ.ಎಸ್. ಕಾನಾಗಡ್ಡಿ, ಅವಿನಾಶ ಬಾನಿಕೋಲ, ಶಿವು ಮಸಬಿನಾಳ, ಶ್ರೀಶೈಲ ಹೆಬ್ಬಾಳ, ರಮೇಶ ಮ್ಯಾಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net