ಶಿವದಾಸಿಮಯ್ಯರ ಆದರ್ಶ ಅಳವಡಿಸಿಕೊಳ್ಳಿ

Adopt the ideals of Shivadasimayya
ಮುಧೋಳದಲ್ಲಿ ಶಿವಸಿಂಪಿ ಸಮಾಜದ ವತಿಯಿಂದ ಶಿವದಾಸಿಮಯ್ಯ ಜಯಂತ್ಯುತ್ಸವ ಆಚರಿಸಲಾಯಿತು. ಲಕ್ಷ್ಮಣ ಶರಣರು, ಶಂಕರ ಲಕ್ಷ್ಮೀಕಾಂತ ಅರಬಳ್ಳಿ, ಡಾ.ಶಿವಾನಂದ ಕುಬಸದ, ವಿಶ್ವನಾಥ ಮುನವಳ್ಳಿ ಇದ್ದರು.
Published on

ಮುಧೋಳ: ಶಿವಸಿಂಪಿ ಸಮಾಜ ಬಟ್ಟೆ ಹೊಲಿಯುವ ಕಾಯಕದ ಜತೆಗೆ ಸಮಾಜದಲ್ಲಿ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಕುಂದರಗಿ ಸುರಗಿರಿ ಬೆಟ್ಟದ ಶ್ರೀ ಸುರಗಿರಿ ಶಕ್ತಿ ಪೀಠದ ಧರ್ಮಾಧಿಕಾರಿ ಲಕ್ಷ್ಮಣ ಶರಣರು ಹೇಳಿದರು.

ನಗರದ ಕಸಾಪ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಶಿವದಾಸಿಮಯ್ಯ ಜಯಂತ್ಯುತ್ಸವ ಹಾಗೂ ಶಿವದಾಸಿಮಯ್ಯ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಶಿವಸಿಂಪಿ ಸಮಾಜ ಇತರ ಸಮಾಜಗಳಿಗಿಂತ ಚಿಕ್ಕ ಸಮಾಜವಾದರೂ, ಚೊಕ್ಕ ಮತ್ತು ಸುಂದರ ಸಮಾಜ. ಇದು ಕೊಡುಗೆ ನೀಡುವ ಸಮಾಜವೇ ಹೊರತು, ಬೇಡುವ ಸಮಾಜವಲ್ಲ. ಸಾಮಾಜಿಕ ಸಂಘಟನೆಯ ಜತೆಗೆ ಸೈದ್ಧಾಂತಿಕವಾಗಿ ಪರಿವರ್ತನೆಯಾಗಬೇಕು ಎಂದರು.

ಪ್ರಾಧ್ಯಾಪಕ ಶಂಕರ ಲಕ್ಷ್ಮೀಕಾಂತ ಅರಬಳ್ಳಿ ಮಾತನಾಡಿ, ಶಿವದಾಸಿಮಯ್ಯ ಅವರ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕು ಎಂದರು.

ಹಿರಿಯ ಸಾಹಿತಿ ಡಾ.ಶಿವಾನಂದ ಕುಬಸದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಒಂದುಗೂಡಿ ಸಮಾಜವನ್ನು ಕಟ್ಟೋಣ. ಸಮಾಜವನ್ನು ತಾವು ಕಟ್ಟಿ ಬೆಳೆಸಿದರೆ, ಸಮಾಜ ತಮ್ಮನ್ನು ಬೆಳಸುತ್ತ ಹೋಗುತ್ತದೆ. ಸಮಾಜದ ಬೆಳವಣಿಗೆಗಾಗಿ ತಾವುಗಳು ಎಲ್ಲದಕ್ಕೂ ಸಿದ್ಧರಾಗಿರಬೇಕು ಎಂದರು.

ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ ಈ. ಗಂಗಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿವದಾಸಿಮಯ್ಯ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಸುರೇಶ ಶಂ. ಮುನವಳ್ಳಿ ವರದಿ ವಾಚಿಸಿದರು. ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷೆ ಕಮಲಕ್ಕ ಶಿ. ಕುಬಸದ, ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಆರ್. ಬಾದಾಮಿ ಮತ್ತಿತರರಿದ್ದರು. ಶಿವಸಿಂಪಿ ಸಮಾಜದ ಮಹಿಳೆಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮಹಾದೇವಪ್ಪ ಬಿ. ಅಬ್ಬಿಗೇರಿ ಸ್ವಾಗತಿಸಿದರು, ಶಿಲ್ಪಾ ಈ. ಕಡಿಬಾಗಿಲ ಅತಿಥಿಗಳನ್ನು ಪರಿಚಯಿಸಿದರು. ವಿಜಯಲಕ್ಷ್ಮೀ ಸು. ಮುನವಳ್ಳಿ ಮತ್ತು ಸುಜಾತಾ ವಿ. ಮುನವಳ್ಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net