

ಶ್ರೀರಂಗಪಟ್ಟಣ: ಭಗವಾನ್ ಬುದ್ಧನ ಆದರ್ಶ ತತ್ವಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಲ್ಲಿ ಯಾರನ್ನೂ ದ್ವೇಷ ಮಾಡುವ ಮನಸ್ಥಿತಿ ನಮ್ಮಿಂದ ದೂರವಾಗುವ ಜತೆಗೆ ಸೌಹಾರ್ದತೆ ಮೈಗೂಡತ್ತದೆ ಎಂದು ಚಾಮರಾಜನಗರದ ನಳಂದ ಬೌದ್ಧ ವಿಶ್ವವಿದ್ಯಾಲಯ ಪರಮಪೂಜ್ಯ ಸ್ವಾಮಿ ಬಂತೇ ಬೋಧಿದತ್ತಥೇರಾ ತಿಳಿಸಿದರು.
ತಾಲೂಕಿನ ಕೆ.ಶೆಟ್ಟಹಳ್ಳಿ ಹೊರವಲಯದ ವಿನಯವನ ಬುದ್ಧ ವಿಹಾರದಲ್ಲಿ ಭಾನುವಾರ ಭಾರತೀಯ ಬೌದ್ಧ ಮಹಾಸಭಾ ಹಾಗೂ ವಿನಯವನ ಬುದ್ಧ ವಿಹಾರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಬುದ್ಧನ 2568ನೇ ವೈಶಾಖ ಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ದಮ್ಮೋಪದೇಶ ನೀಡಿದರು.
ಭೂಮಿಯಲ್ಲಿ ಜೀವ ಪಡೆದ ಎಲ್ಲ ಜೀವಿಗಳಂತೆ ಮನುಷ್ಯನು ಸಹ ಅವುಗಳಂತೆ ಸಮಾನ. ಆದರೆ ಮನುಷ್ಯನ ಮನಸ್ಸಲ್ಲಿ ಮಾತ್ರ ಜಾತಿ, ಧರ್ಮ, ವರ್ಗ ಎಂಬ ಭೇದಗಳಿಂದ ದ್ವೇಷ, ಅಸೂಯೆಗಳನ್ನು ತುಂಬಿಕೊಂಡು ತನ್ನಲ್ಲಿ ಪ್ರೀತಿ, ಕರುಣೆ, ಮಾನವೀಯತೆ, ನೀತಿಗಳಿಂದ ಶುದ್ಧ ಬದುಕನ್ನು ಕಂಡುಕೊಳ್ಳುವುದರ ಬದಲು ಅಶುದ್ಧ ಮನಸ್ಥಿತಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾನೆ. ಪ್ರಮುಖವಾಗಿ ಬುದ್ಧ ಜಯಂತಿಯಂದು ಮಾತ್ರ ಬುದ್ಧನ ಸ್ಮರಿಸುವುದನ್ನು ತ್ಯಜಿಸಿ ನಿತ್ಯವೂ ಬುದ್ಧನ ತತ್ವ-ಆದರ್ಶ ನಿಯಮಗಳನ್ನು ಅಳವಡಿಸಿಕೊಂಡು ತೃಪ್ತಿಕರ ಬದುಕು ಸೃಷ್ಟಿಸಿಕೊಳ್ಳಿ ಎಂದರು.
ದಸಂಸ ರಾಜ್ಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಬುದ್ಧನ ಪಂಚಶೀಲ ತತ್ವಗಳು ನಾಗರಿಕ ಸಮಾಜ ನಿರ್ಮಾಣಗೊಳಿಸುವಲ್ಲಿ ಸಹಕಾರಿ. ನಾವುಗಳೇ ನಿರ್ಮಿಸಿಕೊಂಡ ಜಾತಿ, ವರ್ಗಗಳ ವ್ಯವಸ್ಥೆಯಿಂದ ನಮ್ಮ ನಮ್ಮವರ ನಡುವೆ ಅಸಮಾನತೆ ಉಂಟಾಗಿ ಸಂಘರ್ಷಗಳು ಏರ್ಪಟ್ಟಿವೆ. ದೇಶ-ದೇಶಗಳು ಪರಸ್ಪರ ಯುದ್ಧ ಕಾದಾಟ ನಡೆಯುತ್ತಿದೆ. ಹೀಗಾಗಿ ಬೌದ್ಧ ದಮ್ಮ ಸ್ವೀಕಾರದಿಂದ ಈ ಅಸಮಾನತೆಗಳನ್ನು ತೊಡೆದು ಉನ್ನತಿ ಹಾಗೂ ಮಾನವೀಯ ಮೌಲ್ಯಗಳಿಂದ ಮನುಷ್ಯರಾಗಿ ಬದುಕಲು ಸಹಕಾರಿಯಾಗಲಿದೆ ಎಂದರು.
ಬೆಂಗಳೂರಿನ ಲೋಕರತ್ನ ಬುದ್ಧ ವಿಹಾರ ಸ್ಫೂರ್ತಿಧಾಮದ ದಮ್ಮವೀರ ಬಂತೇಜಿ, ಭಾರತೀಯ ಬೌದ್ಧ ಮಹಾಸಭಾದ ತಾಲೂಕು ಅಧ್ಯಕ್ಷ ಬೆಳಗೊಳ ಬಸವಯ್ಯ, ವಿನಯವನ ಬುದ್ಧ ವಿಹಾರದ ಕಾರ್ಯದರ್ಶಿ ಬಸವರಾಜು, ವಿಧಾನಸೌಧದ ಉಪಕಾರ್ಯದರ್ಶಿ ಶಿವಣ್ಣ, ರಾಮನಗರದ ಗಣಿ ಮತ್ತು ಭೂ ವಿಜ್ಞಾನಿ ಪ್ರಶಾಂತ್, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಅರಕೆರೆ ಶಿವಯ್ಯ, ಮಂಡ್ಯದ ಬೌದ್ಧ ಮಹಾಸಭಾದ ಅಧ್ಯಕ್ಷ ಅನ್ನದಾನಿ, ಕೆ.ಟಿ.ರಂಗಯ್ಯ, ಗಂಜಾಂ ಹೊನ್ನಪ್ಪ, ಸಾವಿತ್ರಿ, ಜಯಂತಿ, ಪ್ರಿಯಾ ರಮೇಶ್ ಇತರರು ಉಪಸ್ಥಿತರಿದ್ದರು.