

ವಿಜಯಪುರ: ಅಷ್ಟಾಂಗಿಕ ಮಾರ್ಗವೆಂದರೆ ಬೌದ್ಧ ಧರ್ಮದ ಪ್ರಮುಖ ಸಿದ್ಧಾಂತ. ದ್ವೇಷವನ್ನು ದ್ವೇಷದಿಂದ ಕೊನೆಗೊಳಿಸಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ನಾವು ದ್ವೇಷವನ್ನು ಕೊನೆಗೊಳಿಸಬಹುದು ಎಂಬ ಸಂದೇಶವನ್ನು ನೀಡಿ ಹೋದ ಜಗತ್ತಿನ ಶ್ರೇಷ್ಠ ದಾರ್ಶನಿಕ ಗೌತಮಬುದ್ಧ. ಅವರ ಅಷ್ಟಾಂಗ ಮಾರ್ಗವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಬುದ್ಧ ಜಯಂತಿ ಹಿನ್ನೆಲೆ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಚಿಂತನಾಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧರು ತಮ್ಮ ಅಷ್ಟಾಂಗ ಮಾರ್ಗಗಳಾದ ಒಳ್ಳೆಯ ನಡತೆ, ಒಳ್ಳೆಯ ಯೋಚನೆ, ಒಳ್ಳೆಯ ಮಾತು, ಒಳ್ಳೆಯ ಕೆಲಸ, ಒಳ್ಳೆಯ ದೃಷ್ಟಿ, ಒಳ್ಳೆಯ ಆಲೋಚನೆ, ಒಳ್ಳೆಯ ಜ್ಞಾನ, ಒಳ್ಳೆಯ ನಂಬಿಕೆಗಳ ಮೂಲಕ ಜಗತ್ತಿಗೆ ಶಾಂತಿ ಮಂತ್ರವನ್ನು ಪಠಿಸಿದರು. ಪ್ರಬುದ್ಧ ಭಾರತದ ಬೆಳಕಾಗಿ ಹೋದವರು ಭಗವಾನ್ ಗೌತಮ ಬುದ್ಧರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಮಾತನಾಡಿ, ಭಗವಾನ್ ಬುದ್ಧರು ಬೌದ್ಧ ಧರ್ಮದ ಸಂಸ್ಥಾಪಕರು. ಚತುರಾರ್ಯ ಸತ್ಯಗಳಾದ ದು:ಖ, ದು:ಖದ ಹುಟ್ಟು, ದು:ಖದ ಅಡಗುವಿಕೆ, ದು:ಖ ನಿವಾರಣೆಗೆ ನಮ್ಮನ್ನು ಕೊಂಡೊಯ್ಯಲು ಅಷ್ಟಾಂಗ ಮಾರ್ಗಗಳನ್ನು ಕಂಡು ಹಿಡಿದ ದಾರ್ಶನಿಕ. ವಿಪಸ್ಸನ ಎಂಬ ಧ್ಯಾನ ಮಾರ್ಗವನ್ನು ಕಂಡು ಹಿಡಿದ ಬುದ್ಧ ಈ ಮಾರ್ಗ ನಮ್ಮ ದು:ಖ ಮತ್ತು ಪಾಪ ಕರ್ಮಗಳಿಂದ ನಮ್ಮನ್ನು ಮುಕ್ತ ಗೊಳಿಸುತ್ತದೆ ಎಂದರು.
ಬನಹಟ್ಟಿಯ ವಿಶ್ರಾಂತ ಪ್ರಾಚಾರ್ಯ ಎಸ್.ಎಂ. ಶೇಖ ಉಪನ್ಯಾಸ ನೀಡುತ್ತಾ, ನಿನಗೆ ನೀನೇ ಬೆಳಕು ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟ ಏಷ್ಯಾದ ಬೆಳಕು ಎಂದು ಖ್ಯಾತಿ ಪಡೆದ ಆಧ್ಯಾತ್ಮದ ಮೇರು ಪರ್ವತವೇ ಗೌತಮಬುದ್ಧ ಎಂದರು.
ನೀಲಮ್ಮ ಹತ್ತಳ್ಳಿ, ಶಂಕರಪ್ಪ ಬಸವಪ್ರಭು (ಸಕ್ರಿ), ಎಸ್.ಎಲ್. ಇಂಗಳೇಶ್ವರ, ಭಾರತಿ ಪ್ರಭುಗೌಡ ಪಾಟೀಲ, ಮಲ್ಲಿಕಾರ್ಜುನ ಮಕಾರ್ತಿಹಾಳ, ಡಾ.ವಿ.ಡಿ. ಐಹೊಳ್ಳಿ, ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ. ಮಾಧವ ಎಚ್.ಗುಡಿ, ಜಿ.ಎಸ್. ಬಳ್ಳೂರ, ಅರ್ಜುನ ಶಿರೂರ, ಕಮಲಾ ಮುರಾಳ, ಎಸ್.ಎಂ. ಕಣಬೂರ, ಶಾಂತಾ ವಿಭೂತಿ, ಮಹಮ್ಮದಗೌಸ್ ಹವಾಲ್ದಾರ್, ಲತಾ ಗುಂಡಿ, ಶಾರದಾ ಐಹೊಳ್ಳಿ, ತೇಜಸ್ವಿನಿ ವಾಂಗಿ, ಎಂ.ಎಲ್. ಅಸ್ಕಿ, ಪ್ರೊ. ದೊಡ್ಡಣ್ಣ ಭಜಂತ್ರಿ, ಶರಣಗೌಡ ಪಾಟೀಲ ಆಹೇರಿ, ಎಸ್.ಎಚ್. ಆಲಗುಂಡಿ, ಸದಾಶಿವ ಅಂಗಡಿ, ಮಂಜುಳಾ ಅಂಗಡಿ, ರಾಜು ಪೋತರಾಜ, ಬಸವರಾಜ ಬಡಿಗೇರ, ಎಚ್.ಎನ್. ಅಲಗುಂಡಿ ಮತ್ತಿತರರಿದ್ದರು.
ಶೋಭಾ ಬಡಿಗೇರ ಸ್ವಾಗತಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿದ್ರಾಮಯ್ಯ ಲಕ್ಕುಂಡಿಮಠ ವಂದಿಸಿದರು.