ಸಿದ್ಧಾಂತ ಶಿಖಾಮಣಿ ತತ್ವಸಂದೇಶ ಅಳವಡಿಸಿಕೊಳ್ಳಿ

25-gdg-4
Published on

ಗದಗ: ವೀರಶೈವ ಸಾಹಿತ್ಯದಲ್ಲಿ ಸಿದ್ಧಾಂತ ಶಿಖಾಮಣಿ ಗ್ರಂಥಕ್ಕೆ ಪೂಜನೀಯ ಸ್ಥಾನವಿದೆ. ಈ ಗ್ರಂಥದಲ್ಲಿ ಸಮಾಜಶಾಸ್ತ್ರ, ಮನಃಶಾಸ್ತ್ರ, ತತ್ವದರ್ಶನವನ್ನು ಕಾಣುತ್ತೇವೆ. ಪ್ರತಿನಿತ್ಯ ಪಾರಾಯಣ ಮಾಡಬೇಕಾದ ಗ್ರಂಥವಿದು ಎಂದು ನರೇಗಲ್ಲ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ರೇಣುಕ ಮಂದಿರದಲ್ಲಿ ಜಾತ್ರಾ ಮಹೋತ್ಸವ ಹಾಗೂ ರೇಣುಕಾಚಾರ್ಯ ಜಯಂತಿ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ರೇಣುಕ ದರ್ಶನ ವಿಷಯ ಕುರಿತು ಅವರು ಪ್ರವಚನ ನೀಡಿದರು.

ಪ್ರಾಚೀನ ಸಂಸ್ಕೃತಿಗಳಲ್ಲಿ ಶಿವಸಂಸ್ಕೃತಿಯೂ ಒಂದು. ಶಿವನೇ ಆರಾಧ್ಯ ದೈವ, ಶಿವಸಂಸ್ಕೃತಿ ನೆಲೆಗೊಳಿಸುವ ಕಾರ್ಯವನ್ನು ಜಗದ್ಗುರು ರೇಣುಕರು ಮಾಡಿದ್ದಾರೆ ಎಂದರು.

ಶಿವಯೋಗ ಮಾರ್ಗ, ಲಿಂಗಾಂಗ ಸಾಮರಸ್ಯದ ಮಾರ್ಗ ಅನುಸರಿಸಿ ಸಿದ್ಧಾಂತ ಶಿಖಾಮಣಿಯ ತತ್ವಸಂದೇಶ, ಆದರ್ಶ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯೋಣ ಎಂದರು.

ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ರೇಣುಕ ಮಂದಿರದ ಚಂದ್ರಶೇಖರ ದೇವರು ನೇತೃತ್ವ ವಹಿಸಿದ್ದರು. ಮೋಟಬಸಪ್ಪ ಶಲವಡಿ ಹಾಗೂ ಮುದ್ರಣೋದ್ಯಮಿ ಪ್ರಶಾಂತ ಶಾಬಾದಿಮಠ ಇದ್ದರು.

ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ವಟುಗಳಿಂದ ವೇದಘೊಷ ಜರುಗಿತು. ಸುರೇಶ ಅಬ್ಬಿಗೇರಿ ಸ್ವಾಗತಿಸಿದರು. ಗುರುಸಿದ್ದಯ್ಯ ಹಿರೇಮಠ ನಿರೂಪಿಸಿದರು. ಪಂಚಾಚಾರ್ಯ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಕೆ. ಗುರುಮಠ ವಂದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಗದಗ-ಬೆಟಗೇರಿ ನಗರಸಭೆಯ ಮಾಜಿ ಸದಸ್ಯ ಎಂ.ಸಿ.ಶೇಖ್, ನಾಗರಾಜ ವಾದೋನಿ, ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ, ಚಂದ್ರು ಬಾಳಿಹಳ್ಳಿಮಠ, ಯು.ಆರ್. ಭೂಸನೂರಮಠ, ಎಂ.ಎಂ. ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net