ಖಿನ್ನತೆಯಿಂದ ಹೊರಬರಲು ಸಕಾರಾತ್ಮಕ ಚಿಂತನೆ ಅಳವಡಿಸಿಕೊಳ್ಳಿ

HUN-OCT-26-1(ADI CHUNCHANAGIRI SCHOOL PROGRAMME)
ಹುಣಸೂರು ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಅನಿತಾ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ಕುಮುದಾ, ಎಸ್.ಶಿವಣ್ಣೇಗೌಡ, ಸಂದೀಪ್, ರಾಜೇಶ್ವರಿ ಇತರರಿದ್ದರು.
Published on

ವಿದ್ಯಾರ್ಥಿಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ ಸಲಹೆ

ಹುಣಸೂರು : ಹದಿಹರೆಯದ ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಮಾನಸಿಕ ಮತ್ತು ದೈಹಿಕ ಆರೋಗ್ಯ ಗಳಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ ಅಭಿಪ್ರಾಯಪಟ್ಟರು.

ನಗರದ ಆದಿಚುಂಚನಗಿರಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಎನ್ನುವುದು ದೇಹಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿದ ವ್ಯಕ್ತಿ ಮಾತ್ರ ಪರಿಪೂರ್ಣ ಆರೋಗ್ಯವಂತ ಎನ್ನಿಸಿಕೊಳ್ಳುತ್ತಾನೆ. ಪ್ರೌಢಾವಸ್ಥೆಯಲ್ಲಿರುವ ವಿದ್ಯಾರ್ಥಿಗಳ ಮನಸ್ಥಿತಿ ಅತ್ಯಂತ ಚಂಚಲತೆಯಿಂದ ಕೂಡಿರುತ್ತದೆ. ಸೌಲಭ್ಯಗಳು ಕೈಗೆಟುಕುವ ಸ್ಥಿತಿಯಲ್ಲಿರುವುದರಿಂದ ಕಷ್ಟದ ಪರಿವೇ ವಿದ್ಯಾರ್ಥಿಗಳಿಗೆ ತಿಳಿದಿಲ್ಲ. ಹಾಗಾಗಿ ಹಿರಿಯರು, ಶಿಕ್ಷಕರು ಬೈದರೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಗೆ ತಲುಪಿದ್ದಾರೆ. ಖಿನ್ನತೆ ಅವರನ್ನು ಕಾಡುತ್ತಿದೆ. ದೈಹಿಕವಾಗಿ ಸದೃಢರಂತೆ ಕಂಡರೂ ಮಾನಸಿಕವಾಗಿ ಕುಗ್ಗಿಹೋದಾಗ ಇಂತಹ ಅವಘಡಗಳು ಸಂಭವಿಸುತವೆ. ಇದೆಲ್ಲಕ್ಕೂ ಪರಿಹಾರವೆಂದರೆ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ರೂಡಿಸಿಕೊಳ್ಳುವುದಾಗಿದೆ. ವಿಶ್ವಾದ್ಯಂತ ಮಾನಸಿಕ ಸದೃಢತೆಗಾಗಿ 1992ರಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಆರಂಭಿಸಲಾಗಿದೆ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಮಾತನಾಡಿ, ಉತ್ತಮ ತಿಳಿವಳಿಕೆ ನೀಡುವ ಮೂಲಕ ಮಾನಸಿಕ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಿದೆ. ಸದಾ ದುಃಖ, ನಿಷ್ಕ್ರಿಯತೆ, ಸುಸ್ತು ಮುಂತಾದವು ಖಿನ್ನತೆಯ ಲಕ್ಷಣಗಳಾಗಿವೆ. ಕಾರಣವಿಲ್ಲದೆ ಖುಷಿಪಡುವುದು, ಪದೇ ಪದೆ ಕೈ ತೊಳೆಯುವ, ಸ್ವಚ್ಛಗೊಳಿಸುವ ಚಟ, ತಲೆನೋವು, ಮೈಕೈ ನೋವು ಮುಂತಾದವು ಖಿನ್ನತೆಯ ಪರಿಣಾಮ. ಈ ಎಲ್ಲ ಸಮಸ್ಯೆಗಳನ್ನು ಕೌನ್ಸೆಲಿಂಗ್ ಮೂಲಕ ಪರಿಹರಿಸಬಹುದಾಗಿದ್ದು, ಪಾಲಕರು ತಮ್ಮ ಮಕ್ಕಳ ಕುರಿತು ಆಗಾಗ್ಗೆ ಗಮನಿಸುತ್ತಿದ್ದಲ್ಲಿ ಸಮಸ್ಯೆಗೆ ಪರಿಹಾರ ಶೀಘ್ರ ಸಾಧ್ಯವೆಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ ಮಾತನಾಡಿದರು. ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಕುಮುದಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಚ್.ಜೆ.ಸಂದೀಪ್, ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net