

ವಿಜಯಪುರ: ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಬೆಳೆಗಳಿಗೆ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದು ಸಹ ವಿಸ್ತರಣಾ ನಿರ್ದೇಶಕ ಆರ್.ಬಿ. ಬೆಳ್ಳಿ ಹೇಳಿದರು.
ಇಂಡಿ ತಾಲೂಕಿನ ಇಂಗಳಗಿ, ಸಾಲೋಟಗಿ, ನಾದ ಕೆ.ಡಿ., ಶಿರಶ್ಯಾಡ ಮತ್ತು ಸಂಗೋಗಿ ಗ್ರಾಮದ ವಿವಿಧ ರೈತರ ಕ್ಷೇತ್ರಗಳಿಗೆ ಶನಿವಾರ ಭೇಟಿ ನೀಡಿ ಅವರು ಮಾಹಿತಿ ತಿಳಿಸಿದರು.
ರೈತರು ಇಂದಿನ ಅಭಾವದ ಪರಿಸ್ಥಿತಿಯಲ್ಲಿ ತಮ್ಮ ಬೆಳೆಗೆ ತಿಪ್ಪೆಗೊಬ್ಬರ, ಎರೆಹುಳು ಮತ್ತು ಸುಲಭ ಬೆಲೆಗೆ ದೊರಕುವ ಜೈವಿಕ ಗೊಬ್ಬರ ಬಳಸಿ ಎರಡು ಸಾಲುಗಳ ಮಧ್ಯದಲ್ಲಿ ಹಸಿರೆಲೆಗೊಬ್ಬರ ಗಿಡಗಳಾದ ಸೆಣಬು, ಡೈಯಂಚಾ ಬೆಳೆದು ಮುಗ್ಗು ಹೊಡೆಯಬೇಕು.
ಬೆಳೆಗಳಿಗೆ ಗೋಕೃಪಾಮೃತ ಜಲ, ಜೀವಾಮೃತ, ಪಂಚಗವ್ಯ ಹಾಗೂ ಬ್ರಹ್ಮಾಸ್ತ್ರದಂತಹ ಪ್ರಚೋದಕ ಸಿಂಪರಣೆ ಮಾಡಬೇಕು. ಬೇಸಿಗೆ ಬಿಸಿಲು ಹೆಚ್ಚಾಗಿದ್ದರಿಂದ ಬೆಳೆಗಳಿಗೆ ಕೃಷಿ ತ್ಯಾಜ್ಯ ಹೊದಿಕೆ ಮಾಡಬೇಕು.
ಸಾವಯವದಿಂದ ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದ್ದು ರೈತರು ಸಾವಯವ ಕೃಷಿ ಕೈಗೊಳ್ಳುವಂತೆ ಸೂಚಿಸಿದರು.
ಪ್ರಗತಿಪರ ರೈತರಾದ ಶಿವಾನಂದ ಕುಂಬಾರ, ಎಸ್.ಟಿ. ಪಾಟೀಲ, ಸಿದ್ದಪ್ಪ ಬೂಸಗೊಂಡ, ಶಿವಾನಂದ ಹುಗ್ಗಿ, ಚಂದ್ರಶೇಖರ ಪಾಸೋಡಿ, ಅನೀಲಕುಮಾರ, ಎಸ್.ಪಿ. ಬಿಸನಾಳ ಮತ್ತಿತರರಿದ್ದರು.