ಬೇಸಾಯದಲ್ಲಿ ಆಧುನಿಕತೆ ಅಳವಡಿಸಿಕೊಳ್ಳಿ

ರಾಮಾಪುರದಲ್ಲಿ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ. ಮೋಹನ್‌ಕುಮಾರ್ ಮಾತನಾಡಿದರು. ದೀಪಾ, ಮನೋಹರ್, ಧರ್ಮೇಂದ್ರ, ಉಪೇಂದ್ರ ಇತರರು ಇದ್ದರು.
ರಾಮಾಪುರದಲ್ಲಿ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ. ಮೋಹನ್‌ಕುಮಾರ್ ಮಾತನಾಡಿದರು. ದೀಪಾ, ಮನೋಹರ್, ಧರ್ಮೇಂದ್ರ, ಉಪೇಂದ್ರ ಇತರರು ಇದ್ದರು.
Published on

ಹನೂರು: ಪ್ರತಿಯೊಬ್ಬರೂ ಆಧುನಿಕ ತಂತ್ರಜ್ಞಾನ ಅಳವಡಿಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದುವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಕೃಷಿ ಅಧಿಕಾರಿ ಮನೋಹರ್ ತಿಳಿಸಿದರು.

ತಾಲೂಕಿನ ರಾಮಾಪುರದಲ್ಲಿ ಸೋಮವಾರ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆ ವತಿಯಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಡಿ ಸ್ಥಳೀಯ ಬೆಳೆಗಳ ನವೀನ ತಾಂತ್ರಿಕತೆ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸರ್ಕಾರ ಕೃಷಿ ಹಾಗೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆಗಳ ಮೂಲಕ ಹಲವು ಸವಲತ್ತುಗಳನ್ನು ನೀಡುತ್ತಿದೆ. ಇದರಿಂದ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಇದೀಗ 2025-26ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಪೂರ್ವಸಿದ್ಧತೆ ಅಂಗವಾಗಿ ಕೇಂದ್ರ ಸರ್ಕಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಆರಂಭಿಸಿದ್ದು, ಕೃಷಿಯಲ್ಲಿ ವೈಜ್ಞಾನಿಕ ಜ್ಞಾನ ಹಾಗೂ ಬೆಂಬಲವನ್ನು ಒದಗಿಸುವುದನ್ನು ಆಧರಿಸಿದೆ. ಜೂ.12ರವರೆಗೆ ತಾಲೂಕಿನ ಗ್ರಾಮಗಳಲ್ಲಿ ಕಾರ್ಯಕ್ರಮವನ್ನು ರೂಪಿಸಿ ರೈತರಿಗೆ ತರಬೇತಿ ಹಾಗೂ ಜಾಗೃತಿಯನ್ನು ಮೂಡಿಸಲಾಗುತ್ತದೆ. ಇದರಲ್ಲಿ ಬೀಜೋಪಚಾರ, ಸುಧಾರಿತ ತಳಿಗಳು, ತೋಟಗಾರಿಕೆ ಬೆಳೆಗಳು, ಸಿರಿಧಾನ್ಯ, ಬೇಸಾಯದ ಕ್ರಮ, ಕೃಷಿ ಯಂತ್ರೋಪಕರಣಗಳು, ಕೀಟ ನಾಶಕಗಳ ನಿವಾರಣೆ ಹಾಗೂ ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಂಡು ಹೆಚ್ಚಿನ ಇಳುವರಿ ಪಡೆಯುವುದರ ಮೂಲಕ ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.

ಹರದನಹಳ್ಳಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಮೋಹನ್ ಕುಮಾರ್ ಹಸಿರೆಲೆ, ಕೊಟ್ಟಿಗೆ ಗೊಬ್ಬರದ ಬಳಕೆ ಬಾಳೆ ಕಂದು ಆಯ್ಕೆ, ವ್ಯವಸಾಯದ ಕ್ರಮ, ಅರಿಶಿಣ ಬೆಳೆಯಲ್ಲಿ ಸುಧಾರಿತ ತಳಿಗಳು, ತೆಂಗು ಬೆಳೆಯ ನಿರ್ವಹಣೆ ಹಾಗೂ ಕೃಷಿಗೆ ಸಂಬಂಧಿಸಿದಂತೆ ಇನ್ನಿತರೆ ವಿಷಯದ ಬಗ್ಗೆ ಮಾಹಿತಿ ತಿಳಿಸಿದರು. ವಿಜ್ಞಾನಿ ದೀಪಾ ಅವರು ಸಿರಿಧಾನ್ಯಗಳ ಮೌಲ್ಯವರ್ಧನೆ, ಉತ್ಕೃಷ್ಟ ಪ್ಯಾಕಿಂಗ್ ಹಾಗೂ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಆತ್ಮ ಸಿಬ್ಬಂದಿ ಪ್ರತಿಮಾ, ಉಪೇಂದ್ರಕುಮಾರ್, ಧರ್ಮೇಂದ್ರ, ವಿನಯ್, ರೈತರು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net