ಸಮಗ್ರ ಕೃಷಿ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ

Adopt integrated farming system
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಖರೀದಿದಾರ-ಮಾರಾಟಗಾರರ ಸಮಾವೇಶದಲ್ಲಿ ಸ್ಥಾಪಿಸಲಾದ ಮಾರಾಟ ಮಳಿಗೆಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಚಾಲನೆ ನೀಡಿದರು. ಡಾ. ವಿಲಿಯಮ್ ರಾಜಶೇಖರ, ಭಾವಿದೊಡ್ಡಿ ರಾಹುಲ್ ಕುಮಾರ ಮತ್ತಿತರರಿದ್ದಾರೆ.
Published on

ವಿಜಯಪುರ: ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ರಾಸಾಯನಿಕ ಗೊಬ್ಬರ ಬಳಸದೇ, ಸಾವಯವ ರಸಗೊಬ್ಬರ ಉಪಯೋಗಿಸಿ ಹೆಚ್ಚಿನ ಇಳುವರಿ ಪಡೆಯಬೇಕು. ಕೃಷಿಯಲ್ಲಿ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕೃಷಿಯೊಂದಿಗೆ ಉಪ ಕಸುಬನ್ನು ಅಳವಡಿಸಿಕೊಳ್ಳಬೇಕು. ತೋಟಗಾರಿಕೆ ಬೆಳೆ ಗಳೊಂದಿಗೆ ಮಿಶ್ರ ಬೇಸಾಯಕ್ಕೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ರೈತರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶ ಏರ್ಪಡಿಸಲಾಗಿದೆ ಎಂದರು.

ಪ್ರತಿ ಮೂರು ತಿಂಗಳಿಗೊಮ್ಮೆ ಕೃಷಿಗೆ ಸಂಬಂಧಿಸಿದ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ಮಹಿಳಾ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸುಮಾರು 35 ರೈತ ಸಂಪನ್ಮೂಲ ಸಂಸ್ಥೆಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿವೆ ಎಂದರು.

ಮಹಾತೇಂಶ ಬಿರಾದಾರ, ಕೃಷಿ ಕಲ್ಪ ಫೌಂಡೇಶನ್ ಸಿಇಒ ಸಿ.ಎಂ. ಪಾಟೀಲ ಹಾಗೂ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ದಾನಮ್ಮ ಪಾಟೀಲ ಮಾತನಾಡಿದರು.

ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಮ್ ರಾಜಶೇಖರ, ತೋಟಗಾರಿಕೆ ಉಪ ನಿರ್ದೇಶಕ ಭಾವಿದೊಡ್ಡಿ ರಾಹುಲ್ ಕುಮಾರ, ಕೃಷಿ ಸಹಾಯಕ ನಿರ್ದೇಶಕ ರಾಘವೇಂದ್ರ ಬಗಲಿ, ಜಿತೇಂದ್ರ ಸಿಂಘಾಲ್, ರವಿ ಸಜ್ಜನರ, ಜಿಜ್ಞೇಶ್ ಜೋಶಿ, ಪ್ರಶಾಂತ ಹೆಗಡೆ ಮತ್ತಿತರರಿದ್ದರು. ವಿವಿಧ 8 ಪ್ರದರ್ಶನ-ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net