

ರಾಯಚೂರು: ಆಧುನಿಕ ಶಿಕ್ಷಣ ಪದ್ಧತಿ ವಿಭಿನ್ನತೆಯಿಂದ ಕೂಡಿದ್ದು, ಪ್ರಾಧ್ಯಾಪಕರು ನವೀನ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಸಲಹೆ ನೀಡಿದರು.
ಸ್ಥಳೀಯ ಬಿಆರ್‌ಬಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಬಹು ವಿಷಯ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿ, ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಅನುಪಾತ ಹೆಚ್ಚಿಸಲು ಉದ್ಯೋಗ ಕೌಶಲ್ಯತೆ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಪತ್ರಕರ್ತೆ ಡಾ.ಅನಿತಾ ಕಪೂರ್ ಮಾತನಾಡಿ, ಪ್ರಕೃತಿ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿರುವುದು ಇಂದಿನ ಅತ್ಯಗತ್ಯವಾಗಿದೆ. ಪ್ರಕೃತಿಯನ್ನು ನಾವು ಕಾಪಾಡಿದಾಗ ಪ್ರಕೃತಿ ನಮ್ಮನ್ನು ಕಾಪಾಡುತ್ತದೆ ಎನ್ನುವುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು ಎಂದರು.
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಂಶೋಧಕರು ವಿವಿಧ ವಿಷಯಗಳ ಬಗ್ಗೆ ವಿಷಯ ಮಂಡನೆ ಮಾಡಿದರು.
ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ಅಧ್ಯಕ್ಷತೆ ವಹಿಸಿದ್ದರು. ಪದಾಕಾರಿಗಳಾದ ಶ್ರೀನಿವಾಸ ನಂದಾಪುರ, ಅಂಬಾಪತಿ ಪಾಟೀಲ್, ಶ್ರೀರಾಮ ಬೂಬ್, ವಿರುಪನಗೌಡ ಗಣೇಕಲ್, ಪ್ರಾಚಾರ್ಯೆ ಡಾ.ಶೀಲಾದಾಸ್ ಉಪಸ್ಥಿತರಿದ್ದರು.