

ತಾಳಿಕೋಟೆ: ದೇಸಾಯಿ ಮನೆತನದ ಇತಿಹಾಸ ಕಾಪಾಡುವುದರೊಂದಿಗೆ ಬ್ರಿಟಿಷರೊಂದಿಗೆ ಯುದ್ಧ ಸಾರಿದ ಧೀರ ಮಹಿಳೆ ಕಿತ್ತೂರ ರಾಣಿ ಚನ್ನಮ್ಮ. ಚನ್ನಮ್ಮಳ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸ್ಥಳೀಯ ರಾಜವಾಡೆಯಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಾಜಿಯ ಮೂರ್ತಿ ಪ್ರತಿಷ್ಠಾಪನೆ ಸಮಿತಿ ನೇತೃತ್ವದಲ್ಲಿ ಗುರುವಾರ ಚನ್ನಮ್ಮಳ ಮೂರ್ತಿ ಅನಾವರಣಗೊಳಿಸಿ ಅವರು ಮಾತನಾಡಿ, ತಾಳಿಕೋಟೆಯ ರಾಜವಾಡೆ ನೋಡಿದರೆ ಕಿತ್ತೂರು ಸಂಸ್ಥಾನದಲ್ಲಿಯ ಅರಮನೆಯ ವಾಡೆಯಂತೆ ಕಾಣುತ್ತದೆ. 32 ಸಾವಿರದಷ್ಟಿದ್ದ ಬ್ರಿಟಿಷರ ಸೈನ್ಯವನ್ನು ಎದುರಿಸಿ ಜಯ ಸಾಧಿಸಿದ ಕೀರ್ತಿ ಚನ್ನಮ್ಮಗಳಿಗೆ ಸಲ್ಲುತ್ತದೆ. ಅವಳ ಧೈರ್ಯ, ಸಾಹಸ, ಉತ್ಸಾಹ ಎಲ್ಲರಿಗೂ ಪ್ರೇರಣಾದಾಯಕ ಎಂದರು.
ಬಸವನಬಾಗೇವಾಡಿ ಪದ್ಮರಾಜ ಒಡೆಯರ ಮಠದ ಶಿವಪ್ರಕಾಶ ಶಿವಾಚಾರ್ಯ ಮಾತನಾಡಿ, ಚನ್ನಮ್ಮಳ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಿಂದ ರಾಜವಾಡೆಗೆ ವಿಶೇಷವಾದ ರಾಜವೈಭವದ ಕಳೆ ಬಂದಿದೆ. ಚನ್ನಮ್ಮಳು ದೇಶಕ್ಕಾಗಿ ಹೋರಾಡಿದ ದಿನಗಳು ಎಷ್ಟು ವರ್ಷಗಳು ಕಳೆದರೂ ಚಿರಸ್ಥಾಯಿಯಾಗಿರುತ್ತವೆ ಎಂದರು.
ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗದೇವರು, ಇಂಗಳೇಶ್ವರ ವಚನ ಶಿಲಾಮಂಟಪ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಸೋಮನಗೌಡ ಮನಗೂಳಿ ಮಾತನಾಡಿದರು.
ಆಲಮೇಲದ ಚಂದ್ರಶೇಖರ ಸ್ವಾಮೀಜಿ, ಮಮದಾಪುರದ ಮುರುಘೇಂದ್ರ ಸ್ವಾಮೀಜಿ, ತಾಳಿಕೋಟೆ ಚರಂತಿಮಠದ ಶಿವಯೋಗಿ ಶಿವಾಚಾರ್ಯರು, ಗುಳೇದಗುಡ್ಡದ ಕಾಶೀನಾಥ ಸ್ವಾಮೀಜಿ, ಹಿರೂರನ ಜಯಸಿದ್ಧೇಶ್ವರ ಶಿವಾಚಾರ್ಯರು, ಚಿಮ್ಮಲಗಿ ಸಿದ್ಧರೇಣುಕಾ ಶಿವಾಚಾರ್ಯರು, ಕಿತ್ತೂರ ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಯ ಗೌರವಾಧ್ಯಕ್ಷ ಚಂದ್ರಶೇಖರ ಪಾಟೀಲ, ಉಪಾಧ್ಯಕ್ಷ ಕಲ್ಲಪ್ಪ ಪಾಟೀಲ, ಕಾರ್ಯದರ್ಶಿ ಭೀಮನಗೌಡ ಪಾಟೀಲ, ಸದಸ್ಯರಾದ ವಿರುಪಾಕ್ಷಪ್ಪಗೌಡ ಪಾಟೀಲ, ಅಧ್ಯಕ್ಷೆ ನೀಲಮ್ಮ ಪಾಟೀಲ, ಮಲ್ಲನಗೌಡ ಕೋರಿ, ಚಂದ್ರಶೇಖರ ತಂಗಡಗಿ, ಮೀನಾಕ್ಷಿ ಪಾಟೀಲ ಇತರರಿದ್ದರು. ಸಾಹಿತಿ ಅಶೋಕ ಹಂಚಲಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.