ಬಾಬೂಜೀ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಎಂ.ಲಕ್ಷ್ಮಣ್ ಕರೆ

M-Lakshmana
Published on

ಮೈಸೂರು: ಬಾಬು ಜಗಜೀವನರಾಮ್ ಅವರಂತಹ ಮಹಾನ್ ಚೇತನರನ್ನು ಪೂಜೆ ಮಾಡುವ ಬದಲು ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸೋಣ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಾಬು ಜಗಜೀವನರಾಂ ಅವರನ್ನು ಕೇವಲ ಒಂದು ಜಾತಿಗೆ ಮೀಸಲಿಡಬಾರದು. ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅವರನ್ನು ಈ ಸುಸಂದರ್ಭದಲ್ಲಿ ನೆನೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

2024ರ ಲೋಕಸಭಾ ಚುನಾವಣೆಯಲ್ಲಿ 22 ರಿಂದ 25 ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲುತ್ತದೆ. ಹಾಗಾಗಿ ತಮ್ಮೆಲ್ಲರ ಸಹಕಾರ ಅವಶ್ಯ ಎಂದರು.
ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ನಾನು ಒಂದಷ್ಟು ಜ್ಞಾನ ಅರಿತು ಇಂದು ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಭಾರತದ ಸಂವಿಧಾನವೇ ಕಾರಣ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವಲ್ಲಿ ಪರಿಣತರು. ಅವರ ಮಾತುಗಳಿಗೆ ಮರುಳಾಗದೆ ಯಾವ ಕಡೆ ಸತ್ಯವಿರುತ್ತದೆ ಅದನ್ನು ಅರ್ಥ ಮಾಡಿಕೊಂಡು ಮತ ನೀಡಿ. ರಾಹುಲ್ ಗಾಂಧಿ ಅವರು ಯುವಜನರ ಆಶಾಕಿರಣ. ಅವರು ಬಬ್ಬ ಸಚಿವರಾಗಿ ಅಥವಾ ಮನಮೋಹನ್‌ಸಿಂಗ್ ಅವರು ಪ್ರಧಾನಿ ಆಗಿದ್ದ ಕಾಲಘಟ್ಟದಲ್ಲಿ 3 ವರ್ಷ ಭಾರತದ ಪ್ರಧಾನಿಗಳಾಗಿ ಕುಳಿತುಕೊಳ್ಳುತ್ತಿದ್ದರು. ಆದರೆ ಅವರಿಗೆ ಅದರ ಆಸೆ ಇರಲಿಲ್ಲ. ಶಾಂತಿಯುತವಾದ ಭವ್ಯ ಭಾರತದ ನಿರ್ಮಾಣ ಅವರ ಕನಸಾಗಿತ್ತು. ರಾಹುಲ್ ಗಾಂಧಿ ಅವರು ಭಾರತ್ ಜೋಡೋ ನ್ಯಾಯ ಯಾತ್ರೆ ಕೈಗೊಂಡು ಭಾರತದ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರಕ್ಕೆ ಸಂಚರಿಸಿ 2024ಕ್ಕೆ ಇಂಡಿಯಾ ಒಕ್ಕೂಟ ಸರ್ಕಾರ ರಚನೆಯಾಗುತ್ತದೆ ಎಂದು ಜನಸಾಮಾನ್ಯರಿಗೆ ತಿಳಿಸಿದರು.

ಪತ್ರಕರ್ತ ಕೆ.ದೀಪಕ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಮೇಯರ್ ನಾರಾಯಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಆರ್.ಮೂರ್ತಿ, ಮಾಜಿ ಜಿಪಂ ಅಧ್ಯಕ್ಷ ಬಿ.ಎಂ.ರಾಮು, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಈಶ್ವರ್ ಚಕ್ಕಡಿ, ಶಿವಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net