ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ

10-MAY-GPT-2
Published on

ಗುಂಡ್ಲುಪೇಟೆ: ಆಧುನಿಕ ಜಗತ್ತಿನಲ್ಲಿ ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಹೋಗಿರುವ ಎಲ್ಲರೂ ಮತ್ತೆ ಹಳ್ಳಿಗೆ ಮರಳಿ ಹಿಂದಿನ ಆರೋಗ್ಯಕರ ಜೀವನಶೈಲಿ ಅಳವಡಿಸುವ ಅಗತ್ಯವಿದೆ ಎಂದು ತೆರಕಣಾಂಬಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ಎಂ.ಮಹೇಶ್ ಹೇಳಿದರು.

ತಾಲೂಕಿನ ತೆರಕಣಾಂಬಿ ಗ್ರಾಮದ ಆಟೋ ಚಾಲಕರ ಸಂಘದ ಆವರಣದಲ್ಲಿ ಪರಂಪರೆ ಪಾಠಶಾಲೆ ವತಿಯಿಂದ ಶನಿವಾರ ಆಯೋಜಿಸಿದ್ದ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದೆ ಜನರು ನೂರಾರು ವರ್ಷ ಆರೋಗ್ಯವಾಗಿರುತ್ತಿದ್ದರು. ಈ 50-60 ವರ್ಷ ಬದುಕುವುದೇ ಸವಾಲಾಗಿದೆ. ಆದ್ದರಿಂದ ವಲಸೆ ಹೋಗಿರುವ ಜನರು ಮರಳಿ ಊರುಗಳಿಗೆ ಬಂದರೆ ನಮ್ಮ ಜೀವನ ಮತ್ತು ಜೀವನಶೈಲಿಯನ್ನು ಬದಲಿಸಿ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ಅನುಭವಮಂಟಪ ಆರಂಭಿಸಿ ಸಮಾಜದ ಕಲ್ಯಾಣಕ್ಕಾಗಿ ಚರ್ಚಿಸಿದ ತೀರ್ಮಾನಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿದ್ದರು. ಈ ಬಗ್ಗೆ ಪರಂಪರೆ ಪಾಠಶಾಲಾ ಸಂಸ್ಥೆಯು ಸ್ವಾತಂತ್ರ್ಯದ 100 ನೇ ವರ್ಷಾಚರಣೆಯಾದ 2047 ವೇಳೆಗೆ ಭಾರತವನ್ನು ಸಂಪೂರ್ಣ ಪಾರಂಪರಿಕವಾಗಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಮಾಡುತ್ತಿದೆ. ಸಾರ್ವಜನಿಕರೊಂದಿಗೆ ಚರ್ಚಿಸುವ ಮೂಲಕ ಯುವ ಜನತೆಯಲ್ಲಿ ಬದಲಾವಣೆಯ ಚಿಂತನೆ ಮೂಡುವಂತೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಎಸ್.ಮಹೇಶ್, ಸಂಸ್ಥೆಯ ಸದಸ್ಯರು, ಆಟೋ ಚಾಲಕರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net