

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಸಮಾಜದಲ್ಲಿನ ಒಳ್ಳೆ ವಿಚಾರಗಳನ್ನು ಮಾತ್ರ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಹೇಳಿದರು.
ನಗರದ ಎಕ್ಸಲೆಂಟ್ ನೀಟ್ ಅಕಾಡೆಮಿ ವತಿಯಿಂದ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ವೈದ್ಯಕೀಯ ಸೀಟು ಪಡೆದು ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಉತ್ತಮ ವಿದ್ಯಾರ್ಥಿಗಳೇ ದೇಶದ ಆಸ್ತಿ. ಒತ್ತಡರಹಿತ ಓದು ನಮ್ಮದಾಗಬೇಕು. ತಾಳ್ಮೆ ಜತೆಗೆ ಪಾಲಕರ ಹಾಗೂ ಶಿಕ್ಷಕರ ಸಲಹೆಗಳನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಸೈಬರ್ ಕ್ರೈಂ ಬಲೆಗೆ ಬೀಳಬಾರದು. ಯೌವ್ವನದ ಹೊಸ್ತಿಲಲ್ಲಿ ಎಡವದೆ ಕಠಿಣ ಪರಿಶ್ರಮದ ಮೂಲಕ ಸಾಧನೆಗೈದಾಗ ಸನ್ಮಾನಗಳು ಹುಡುಕಿಕೊಂಡು ಬರುತ್ತವೆ ಎಂದರು.
ಮನೊರೋಗ ತಜ್ಞ ಡಾ. ಆನಂದ ಪಾಂಡುರಂಗಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ವೈದ್ಯರಿಗೆ ಎಲ್ಲ ಕಡೆಗಳಲ್ಲಿ ಗೌರವವಿದೆ. ವೈದ್ಯರಾಗುವ ವಿದ್ಯಾರ್ಥಿಗಳಲ್ಲಿ ಅಭರುಚಿ, ಸಮರ್ಪಣಾಭಾವ, ಬದ್ಧತೆ ಇದ್ದಾಗ ಗುರಿಮುಟ್ಟಲು ಸಾಧ್ಯ. ವೃತ್ತಿ ಧರ್ಮ ಎನ್ನುವುದು ಶ್ರೇಷ್ಠ ಧರ್ಮ. ಹೀಗಾಗಿ ಶಿಕ್ಷಕರಿಗೆ, ವೈದ್ಯರಿಗೆ ಹೃದಯ ಶ್ರೀಮಂತಿಕೆ ಇರಬೇಕು ಎಂದರು.
ಅಮ್ಮನ ಮಡಿಲು ಚಾರಿಟೇಬಲ್‌ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿದರು. ವಿಶ್ರಾಂತ ಉಪಕುಲಪತಿ ಡಾ. ಎಸ್.ಬಿ.ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್ ಸೀಟುಪಡೆದ ಸುಮಾರು 100 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸೇವಾ ನಿವೃತ್ತಿ ಹೊಂದಿದ ಎಸ್.ವಿ.ಗಿರಿಯಪ್ಪನವರ, ಎಂ.ಎಸ್. ಕೌಲಗಿ, ಸಂಗಪ್ಪ ಕೋಟಿ, ವಸಂತ ದೇಸಾಯಿ, ಐ.ಎಸ್.ರೋಣದ, ಮಲ್ಲನಗೌಡ ಪಾಟೀಲ, ಮುಮ್ಮಿಗಟ್ಟಿ ಗ್ರಾಪಂ ಅಧ್ಯಕ್ಷ ಬಸವರಾಜ ಮರಿತಿಮ್ಮನವರ ಅವರನ್ನು ಸತ್ಕರಿಸಲಾಯಿತು. ಶಿವನಾಂದ ಕಲ್ಯಾಣಿ, ನಿರ್ದೇಶಕರಾದ ಪ್ರವೀಣ ಗಿರಯಪ್ಪನವರ, ಸಚಿನ ಗಿರಿಯಪ್ಪನವರ, ಆಡಳಿತಾಧಿಕಾರಿ ಶಿವಾನಂದ ಬಿರಾದಾರ, ಕಾರ್ಯದರ್ಶಿ ಸತೀಶ ಜಾಧವ ಉಪಸ್ಥಿತರಿದ್ದರು.
ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಸ್ವಾಗತಿಸಿದರು. ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಗೌಡ ಪಾಟೀಲ ಹಾಗೂ ಮುಸ್ತಾಕ್ ಮಲಘಾರ್ ನಿರೂಪಿಸಿದರು. ಪ್ರತಾಪ್.ಟಿ.ಆರ್. ವಂದಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.