

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬರೂ ಬಾಹ್ಯಕ್ಕಿಂತ ಅಂತರಂಗದಲ್ಲಿ ಸುಂದರವಾಗಿ ಕಾಣುವುದು ಮುಖ್ಯ. ಪರಿಸರದ ಬಗ್ಗೆ ಪ್ರೀತಿ ಹೊಂದಿರುವವರು ನಿಜವಾದ ವಿಜ್ಞಾನಿಗಳು ಎಂದು ಐಐಟಿ ಗೌರವ ಪ್ರಾಧ್ಯಾಪಕ ಪ್ರೊ. ಎಂ.ಎಸ್. ಶಿವಪ್ರಸಾದ ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ರಾಯಾಪುರದ ಎಸ್ಕೆಡಿಆರ್ಡಿಪಿ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ "ಅನ್ವೇಷಣೆ' ಮಕ್ಕಳ ವಸತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಮ್ಮನ್ನು ನೀವು ಅರಿತುಕೊಂಡಾಗಲೇ ಸಾಧನೆ ಸಾಧ್ಯ. ಪ್ರತಿಯೊಬ್ಬರಲ್ಲೂ ಅಗಾಧ ಶಕ್ತಿ ಇದೆ. ಎಲ್ಲರೂ ಒಂದೇ ಭಾವನೆಯೊಂದಿಗೆ ಹೊಂದಾಣಿಕೆಯಿಂದ ಜೀವಿಸುವುದರಲ್ಲೇ ನಿಜವಾದ ಸಂತೋಷ ಅಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹರ್ಷವರ್ಧನ ಶೀಲವಂತ ಮಾತನಾಡಿ, ಮಕ್ಕಳು ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ಯಾರು ಹೆಚ್ಚು, ಕಡಿಮೆ ಎಂಬುದಿಲ್ಲ. ಅವರವರ ಬುದ್ದಿಮಟ್ಟಕ್ಕೆ ತಕ್ಕಂತೆ ಎಲ್ಲರೂ ಜಾಣರೇ. ನಾಡು ನುಡಿ ಮೆಚ್ಚುವಂತಹ ಸಾಧನೆ ಮಾಡಬೇಕು ಎಂದರು.
2 ದಿನಗಳ ಶಿಬಿರದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ ವಿಭಾಗಗಳಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ 27 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪ್ರವಿಣಕುಮಾರ ಎಸ್., ಡಾ.ಮಂಜುನಾಥ ಹಿರೇಮಠ, ಜಯಂತ ಕೆ.ಎಸ್, ಇತರರು ಇದ್ದರು.ಸಂಪತ್ತಕುಮಾರ ಹೊಂಗಲಮಠ ಸ್ವಾಗತಿಸಿದರು.