

ದೇವದುರ್ಗ: ಹದಿಹರೆಯದ ಬಾಲಕಿ, ಬಾಲಕರ ಕಿಶೋರಾವಸ್ಥೆಯಲ್ಲಿ ದೈಹಿಕ ಬದಲಾವಣೆ ಆಗುತ್ತಿದ್ದು, ಇಬ್ಬರಿಗೂ ಆರೋಗ್ಯ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ರಾಮದುರ್ಗ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗೀತಾಂಜಲಿ ಹೇಳಿದರು.
ತಾಲೂಕಿನ ಮಲದಕಲ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಹತ್ತರಿಂದ ಹದಿನೈದು ವಯೋಮಾನದ ಮಕ್ಕಳಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಬದಲಾವಣೆಗಳನ್ನು ಕಾಣಬಹುದು. ಇಂಥ ಬದಲಾವಣೆಯಾದಾಗ ಯಾವುದೇ ಭಯ, ಮುಜುಗರ, ಗೊಂದಲಕ್ಕೆ ಒಳಗಾಗದೆ ವೈದ್ಯರ ಸಲಹೆ ಪಡೆಯಬೇಕು. ಅಲ್ಲದೆ ಸಮತೋಲನ ಪೌಷ್ಟಿಕ ಆಹಾರ ಸೇವಿಸಬೇಕು. ಕಬ್ಬಿಣಾಂಶ ಮಾತ್ರೆ ಸೇವಿಸುವುದರ ಮೂಲಕ ರಕ್ತಹೀನತೆ ಕಾಯಿಲೆಯನ್ನು ತಡೆಗಟ್ಟಬಹುದು ಎಂದರು.
ಹದಿಹರೆಯದ ಆಪ್ತ ಸಮಾಲೋಚಕ ಚಿರಂಜೀವಿ, ಸಿಎಚ್‌ಒ ಜಾಫರ್, ಪ್ರಾಥಮಿಕ ಸುರಕ್ಷತಾ ಅಧಿಕಾರಿ ಮಂಜುಳಾ ಶುಕ್ಲ, ಖಾಸಿಂಬೀ, ಶಿಕ್ಷಕರಾದ ಶಬಾನ್, ಬಾಲಯ್ಯ, ಪ್ರಶಾಂತ, ಆಶಾ ಕಾರ್ಯಕರ್ತೆಯರಾದ ಮಲ್ಲಮ್ಮ, ಮಂಜುಳಾ ಇತರರಿದ್ದರು.