

ಶಿರಹಟ್ಟಿ: ತಾಲೂಕಿನ ಕಡಕೋಳ ಗ್ರಾಮದ ಪಬ್ಲಿಕ್ ಶಾಲೆಯಲ್ಲಿ ಹಾಜರಾತಿ ಕೊರತೆಯ ಕಾರಣ 28 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ನಿರಾಕರಿಸಲಾಗಿದೆ. ಶಾಲೆಯ ಒಟ್ಟು 79 ವಿದ್ಯಾರ್ಥಿಗಳಲ್ಲಿ 51 ವಿದ್ಯಾರ್ಥಿಗಳು ಮಾತ್ರ ಅಗತ್ಯವಿರುವ ಶೇ. 75ರಷ್ಟು ಹಾಜರಾತಿ ಹೊಂದಿದ್ದು ಅವರಿಗೆ ಪ್ರವೇಶ ಪತ್ರ ನೀಡಲಾಗಿದೆ. ಉಳಿದ 28 ವಿದ್ಯಾರ್ಥಿಗಳ ಪೈಕಿ 9 ಜನರು ಕಡಿಮೆ ಹಾಜರಾತಿ ಹೊಂದಿದ್ದರು, ಮತ್ತು 19 ವಿದ್ಯಾರ್ಥಿಗಳು ಸಂಪೂರ್ಣವಾಗಿ ಗೈರಾಗಿದ್ದರಿಂದ ಅವರಿಗೆ ಪ್ರವೇಶ ಪತ್ರ ನೀಡಲಾಗಿಲ್ಲ. ಈ ಬಗ್ಗೆ ವಿದ್ಯಾರ್ಥಿ ಪಾಲಕರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಲೆಯ ಮುಖ್ಯೋಪಾಧ್ಯಾಯ ಎನ್.ಬಿ. ಮುಲಕಿಗೌಡ, ಪರೀಕ್ಷೆ ಫಲಿತಾಂಶದ ಗುಣಮಟ್ಟ ಸುಧಾರಿಸಲು ಹಾಗೂ ಇಲಾಖೆಯ ನಿಯಮಗಳ ಅನುಸರಣೆಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರ ಪರಿಶೀಲನೆ: ತಹಸೀಲ್ದಾರ್ ಅನಿಲ ಬಡಿಗೇರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಯಕ್ ಅವರು ಶಿರಹಟ್ಟಿ ಸಿಸಿಎನ್ ಅಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ ಪರೀಕ್ಷಾ ಕೇಂದ್ರದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಪ್ರೋತ್ಸಾಹಿಸಿದರು.